×
Ad

ಕಡೂರು: ನೋಡುಗರ ಕಣ್ಮನ ಸೆಳೆದ ದಸರಾ ಮಹೋತ್ಸವ

Update: 2017-09-30 19:31 IST

ಕಡೂರು, ಸೆ. 30: ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗಿದ ಮಠದ ಆನೆ ಗಜಲಕ್ಷ್ಮೀ, ಹಿಂಬಾಲಿಸಿದ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ರಂಭಾಪುರಿ ಜಗದ್ಗುರುಗಳೇ ಸ್ವಯಂ ಕುಂಭ ಹೊತ್ತು ಆಗ್ರೋದಕ ತಂದ ಭಕ್ತಿಯ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.

ರಂಭಾಪುರಿ ಜಗದ್ಗುರುಗಳ ಶರವನ್ನರಾತ್ರಿ ದಸರಾ ಮಹೋತ್ಸವ ಹಾಗೂ ದಸರಾ ದರ್ಬಾರ್ ಸಮ್ಮೇಳನದ 10 ದಿನವಾದ ಶನಿವಾರ ವಿಜಯ ದಶಮಿಯ ದಿನದಂದು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮಕ್ಕೆ ಹಳೇಪೇಟೆಯ ಶ್ರೀ ಮರುಳಸಿದ್ದಸ್ವಾಮಿ ದೇವಾಲಯದಿಂದ ಅಗ್ರೋದಕವನ್ನು ಮುತ್ತೈದೆಯರ ಜೊತೆ ಜಗದ್ಗುರುಗಳು ಕೂಡ ಕುಂಭ ಹೊತ್ತು ತಂದ ಸನ್ನಿವೇಶ ಭಾವಪೂರ್ಣವಾಗಿತ್ತು.

9 ದಿನಗಳ ಕಾಲ ನಡೆದ ಇಷ್ಟಲಿಂಗ ಪೂಜೆ ಕಾರ್ಯಕ್ರಮಕ್ಕೆ ಪ್ರತಿದಿನ ಒಂದೊಂದು ದೇವಾಲಯದಿಂದ ಅಗ್ರೋದಕವನ್ನು ಮುತ್ತೈದೆಯರು ಭಕ್ತಿಯಿಂದ ಹೊತ್ತು ತಂದು ಅರ್ಪಿಸುತ್ತಿದ್ದರು. ಆದರೆ 10ನೇ ದಿನ ಮುತ್ತೈದೆಯರ ಜೊತೆ ಜಗದ್ಗುರುಗಳು ಪೂರ್ಣಕುಂಭ ಹೊರುವ ಘಟನೆ ನೂರಾರು ಭಕ್ತರ ಕಣ್ಣನ್ನು ಪಾವನಗೊಳಿಸಿತು.

ಜಗದ್ಗುರುಗಳ ಈ ಪೂರ್ಣಕುಂಭ ಹೊರುವ ಘಟನೆ 2009ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಚಾಲ್ತಿಗೆ ಬಂದಿತು. ನಂತರ ಗಜೇಂದ್ರಗಢ, ಬೆಂಗಳೂರು, ಗಂಗಾವತಿ, ಜೇವರ್ಗಿ, ಅರಸೀಕೆರೆ, ಭದ್ರಾವತಿ ಮತ್ತು ಕುಡಚಿ ದರ್ಬಾರ್ ಮಹೋತ್ಸವದಲ್ಲಿಯೂ ಇದು ಮುಂದುವರೆದು ಕಡೂರಿನಲ್ಲಿ ಕೂಡ ಭಕ್ತರ ಮನಸೂರೆಗೊಂಡಿದೆ.

ಸುಮಾರು 2 ಕಿ.ಮೀ ದೂರವನ್ನು ಜಗದ್ಗುರುಗಳು ಮುತ್ತೈದೆಯರ ಜೊತೆ ಹೆಜ್ಜೆ ಹಾಕುತ್ತಾ ಪೂರ್ಣಕುಂಭ ಹೊತ್ತು ಸಾಗಿದರು. ತಿಳಿಹಸಿರು ಬಣ್ಣದ ಉಡುಗೆ ತೊಟ್ಟಿದ್ದ ಜಗದ್ಗುರುಗಳು ಪ್ರಸನ್ನವದನರಾಗಿ ಕುಂಭ ಹೊತ್ತು ಸಾಗುತ್ತಿದ್ದರೆ ಅವರ ಜಿತೆಗೆ ಕುಪ್ಪೂರು, ಬೀರೂರು, ಹುಲಿಕೆರೆ, ಎಡೆಯೂರು ಸೇರಿದಂತೆ ಮುಂತಾದ ಶಾಖಾ ಮಠಗಳ ಶ್ರೀಗಳು ಕೂಡ ಹೆಜ್ಜೆ ಹಾಕಿದರು.

ನಂತರ ತಮ್ಮ ಸ್ಥಳವಾದ ವಾಸವಿ ಕಲ್ಯಾಣ ಮಂಟಪ ತಲುಪಿದ ಅಗ್ರೋದಕ ಹೊತ್ತ ಜಗದ್ಗುರುಳು ಮತ್ತು ಮುತ್ತೈದೆಯರು ಕುಂಭವನ್ನು ಇಳಿಸಿದರು. ಜಗದ್ಗುರುಗಳು ಇಷ್ಟಲಿಂಗ ಪೂಜೆಗೆ ತನ್ಮಯರಾಗಿ ಕುಳಿತು ಇಷ್ಟಲಿಂಗ ಪೂಜಾ ಕಾರ್ಯ ನೆರವೇರಿಸಿದರು.
ಅಗ್ರೋದಕ ಹೊತ್ತು ತರುವ ಮೆರವಣಿಗೆ ಮಠದ ವಾದ್ಯಗೋಷ್ಟಿ, ಮಹಿಳಾ ವೀರಗಾಸೆ ಮೆರಗು ತಂದಿದ್ದವು. ಮೆರವಣಿಗೆಯಲ್ಲಿ  ದರ್ಬಾರ್ ಮಹೋತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ಹೂವಿನಗೋವಿಂದಪ್ಪ, ಸಮಿತಿ ಕಾರ್ಯದರ್ಶಿ ಹೆಚ್.ಎಂ. ಲೋಕೇಶ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News