ಆಟೋ-ಮಿನಿ ಲಾರಿ ಢಿಕ್ಕಿ : ಐವರು ಮೃತ್ಯು
Update: 2017-09-30 20:05 IST
ರಾಯಚೂರು, ಸೆ. 30: ಟಂಟಂ ಆಟೋ ಹಾಗೂ ಮಿನಿ ಲಾರಿ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸೇರಿ ಐದು ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಇಲ್ಲಿನ ಸಿಂಧನೂರು ಪಟ್ಟಣದ ಹೊರ ವಲಯದಲ್ಲಿ ಸಂಭವಿಸಿದೆ.
ಮೃತರನ್ನು ಸಿಂಧನೂರು ಸಮೀಪದ ಬೂತಲದಿನ್ನಿ ಗ್ರಾಮದ ಈರಯ್ಯ ಸ್ವಾಮಿ (55), ಚಾಲಕ ಶಾಹೀದ್ (35), ಸಜ್ಜಲಿ ಸಾಬ್(40), ಖಾಜಮ್ಮ (65), ಲಾಲ್ ಬೀ (12) ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನ 1:45ರ ಸುಮಾರಿಗೆ ಇಲ್ಲಿನ ಸಿಂಧನೂರು ಪಟ್ಟಣದ ಹೊರ ವಲಯದ ಏಳುರಾಗಿ ಕ್ಯಾಂಪ್ ಬಳಿ ಅವಘಡ ಸಂಭವಿಸಿದೆ. ಸಂತೆ ಮುಗಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಈ ಸಂಬಂಧ ಸಿಂಧನೂರು ಸಂಚಾರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.