×
Ad

ಜನರನ್ನು ಮೂರ್ಖರನ್ನಾಗಿಸುವ ಜನಪ್ರತಿನಿಧಿಗಳು : ಹೇಮಚಂದ್ರ

Update: 2017-09-30 22:02 IST

ಚಿಕ್ಕಬಳ್ಳಾಪುರ,ಸೆ.30: ಚುನಾವಣಾ ಸಂದರ್ಭದಲ್ಲಿ ಜನರನ್ನು ಮೂರ್ಖರನ್ನಾಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಒಂದೊಂದು ಯೋಜನೆಯನ್ನು ಮುಂದಿಡುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಷನ್ (ಡಿವೈಎಫ್‍ಐ) ಜಿಲ್ಲಾ ಘಟಕದ ಅಧ್ಯಕ್ಷ ಹೇಮಚಂದ್ರ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎರಡು ವರ್ಷಗಳಲ್ಲಿ ನೀರು ಈ ಭಾಗಕ್ಕೆ ಹರಿಸಲಾಗುವುದು ಎಂದು ಆರಂಭಗೊಂಡ ಎತ್ತಿನಹೊಳೆ ಯೋಜನೆಯಿಂದ ಇದುವರೆಗೂ ನೀರು ಬಂದಿಲ್ಲ. ಅಲ್ಲದೆ ಈ ಯೋಜನೆಯಿಂದ ನೀರು ಬರುವುದೂ ಇಲ್ಲವೆಂದು ತಿಳಿಸಿದರು.

ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಶಾಶ್ವತ ನೀರಾವರಿ ಹೋರಾಟ ಹುಟ್ಟು ಹಾಕಿದ ಕೀತಿ ಡಿವೈಎಫ್‍ಐಗೆ ಸಲ್ಲುತ್ತದೆ. ಆದರೆ ಇದೀಗ ದಿಕ್ಕು ತಪ್ಪಿರುವ ಶಾಶ್ವತ ನೀರಾವರಿ ಹೋರಾಟವನ್ನು ಜಿಲ್ಲೆಯ ಯುವ ಜನರ ನೆರವು ಮತ್ತು ಸಹಕಾರದಿಂದ ಮತ್ತೆ ತೀವ್ರಗೊಳಿಸಲಾಗುವುದು ಎಂದ ಅವರು, ಈ ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಬದಲು ಕೊಳಚೆ ನೀರನ್ನು ನೀಡಲು ಹೊರಟಿರುವ ಸರ್ಕಾರದ ನಿಲುವಿಗೆ ಸಂಘಟನೆಯ ವಿರೋಧವಿದೆ ಎಂದರು.

ಬೆಂಗಳೂರಿನಲ್ಲಿ ಅ.01 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಡಿವೈಎಫ್‍ಐ ರಾಜ್ಯ ಸಮ್ಮೇಳನ ನಡೆಯಲಿದ್ದು, ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾ ಸಮ್ಮೇಳನ ನಡೆಸಲಾಯಿತು. ಅಂತೆಯೇ ಸೆ.20 ರಂದು ಬಾಗೇಪಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮ್ಮೇಳದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.

ಜಿಲ್ಲೆಯನ್ನು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಹಸಿರು ವಲಯವನ್ನಾಗಿಸಬೇಕು, ಕೃಷಿಗೆ ಹೆಚ್ಚಿನ ಪ್ರಧಾನ್ಯತೆ ನೀಡಬೇಕು, ಅಂತರ್ಜಲ ವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಬೇಕು, ಕೃಷಿಕರು ವಲಸೆ ಹೋಗುವುದನ್ನು ತಪ್ಪಿಸಲು ಕೃಷಿ ಆಧಾರಿತ ಕೈಗಾರಿಕೆಗಳನ್ನು ತೆರೆಯಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳುವ ಜೊತೆಗೆ ನಿರ್ಣಯ ಈಡೇರಿಕೆಗೆ ಹಲವು ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.

ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡುವ ಜೊತೆಗೆ ಕಳೆದ ಹಲವು ವರ್ಷಗಳ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಪರಾಮರ್ಶಿಸಲಾಯಿತು. ಅಲ್ಲದೆ ಸಂಘಟನೆಯನ್ನು ಎಲ್ಲ ತಾಲೂಕುಗಳಲ್ಲಿ ಸದೃಢಗೊಳಿಸಲು ಉದ್ದೇಶಿಸಲಾಗಿದ್ದು, ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಚುರುಕುಗೊಳಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‍ಐ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅಶ್ವತ್ಥರೆಡ್ಡಿ, ಫಯಾಜ್, ಕಾರ್ಯದರ್ಶಿ ಮಧು, ಜಂಟಿ ಕಾರ್ಯದರ್ಶಿ ಆಸೀಫ್, ರಮಣ್ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News