×
Ad

ನಾಪೋಕ್ಲು : ಆಯುದಾಪೂಜಾ ಸಮಾರಂಭ

Update: 2017-09-30 22:06 IST

ನಾಪೋಕ್ಲು,ಸೆ.30:ವಾಹನ ಚಾಲಕರು ಹಾಗೂ ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಪೋಲಿಸ್ ಇಲಾಖೆಯೊಂದಿಗೆ ಕೈಜೊಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು.ಇಲ್ಲಿನ ವಾಹನ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಎರ್ಪಡಿಸಲಾಗಿದ್ದ 27 ನೇ ವರ್ಷದ ಆಯುದಾಪೂಜಾ ಸಮಾರಂಭ ಪ್ರಯುಕ್ತ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ದಟ್ಟಣೆಯು ಅಧಿಕವಾಗುತ್ತಿದೆ.

ಕಿರಿದಾದ ರಸ್ತೆಗಳಿಂದ ಪಟ್ಟಣವು ಕಿಷ್ಕಿಂಧೆಯಾಗುತ್ತಿದ್ದು ಚಾಲಕರು ಹಾಗೂ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಟ್ರಾಫಿಕ್ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿ ಅಷ್ಟೇ ಅಲ್ಲ ಅವರೊಂದಿಗೆ ವಾಹನ ಚಾಲಕರು ಮಾಲಿಕರು ಸಹಕರಿಸುವುದು ಅತ್ಯಗತ್ಯವಾಗಿದೆ ಎಂದರು. ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ ಎಲ್ಲಾ ಜನಾಂಗದವರು ಒಗ್ಗೂಡಿ ಆಚರಿಸುವ ಆಯುಧ ಪೂಜಾ ಸಮಾರಂಭದಿಂದ ಶಾಂತಿ ಸಹಬಾಳ್ವೆಗೆ ಸಹಕಾರಿಯಾಗಲಿದೆ ಎಂದರು.

ಗ್ರಾಮಪಂಚಾಯತ್ ಮಾಜಿ ಸದಸ್ಯ ಶಿವಚಾಳಿಯಂಡ ಜಗದೀಶ್ ಆಯುಧಪೂಜಾ ಸಮಾರಂಭದ ಪುರಾಣ ಕತೆಯನ್ನು ಉಲ್ಲೇಖಿಸಿ ಧಾರ್ಮಿಕ ಮಹತ್ವವನ್ನು ಕುರಿತು ಮಾತನಾಡಿದರು. ವಾಹನ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಮೂವೇರ ವಿನುಪೂಣಚ್ಚ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಬೈರುಡ ಮುತ್ತಪ್ಪ, ಬೊಳ್ಳಮ್ಮ ನಾಣಯ್ಯ, ಮನ್ಸೂರ್‍ಆಲಿ, ಬೊಪ್ಪೇರ ಕಾವೇರಪ್ಪ, ಅರುಣ್‍ಬೇಬ, ಸೇರಿದಂತೆ ಗಣ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ಅಲಂಕೃತ ವಾಹನಗಳ ಹಾಗೂ ಅಂಗಡಿಗಳ ಮಾಲಿಕರಿಗೆ ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು. ಸಮಾರಂಭದ ಅಂಗವಾಗಿ ಹಳೆತಾಲೂಕಿನಿಂದ ಮಾರುಕಟ್ಟೆವರೆಗೆ ಮೆರವಣಿಗೆ ನಡೆಯಿತು. ಶ್ರೀಕನ್ಯಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕುಂದೇರಿರ ರಮೇಶ್ ಸ್ವಾಗತಿಸಿ ವಂದಿಸಿದರು. ನಂತರ ನಡೆದ ಆರ್ಕೇಸ್ಟ್ರಾ ಕಾರ್ಯಕ್ರಮದಲ್ಲಿ ಹಾಡು ಮತ್ತು ನೃತ್ಯಗಳು ನೆರೆದಿದ್ದವರನ್ನು ರಂಜಿಸಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News