ಡಾ.ಸತ್ಯಕಿ ನೇತೃತ್ವದ ತಜ್ಞ ವೈದ್ಯರ ತಂಡ ನನಗೆ ಎರಡನೆ ಜನ್ಮ ನೀಡಿದೆ:ಕುಮಾರಸ್ವಾಮಿ
ಬೆಂಗಳೂರು, ಅ.1: "ಅಪೋಲೊ ಆಸ್ಪತ್ರೆಯ ಡಾ.ಸತ್ಯಕಿ ನೇತೃತ್ವದ ತಜ್ಞ ವೈದ್ಯರ ತಂಡ ನನಗೆ ಎರಡನೆ ಜನ್ಮ ನೀಡಿದೆ" ಎಂದು ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಪೋಲೊ ಆಸ್ಪತ್ರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ರೆ ವಾಪಾಸ್ ಬರುತ್ತಿದ್ದೆನ್ನೊ ಏನೋ . ಆದರೆ ಇಲ್ಲಿ ಎಲ್ಲರ ಹರಕೆ ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡಿದ್ದೇನೆ.ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ" ಎಂದರು.
"ಇಸ್ರೇಲ್ ಗೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಹೆಜ್ಜೆ ನಡೆಯಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೂ ಅದೇ ಪರಿಸ್ಥಿತಿ. ಇಸ್ರೇಲ್ ನಲ್ಲಿ ಆಸ್ಪತ್ರೆಯೊಂದಕ್ಕೆ ತೋರಿಸಿದೆ. ಅಲ್ಲಿನ ವೈದ್ಯರು ಕೂಡಲೇ ಅಡ್ಮಿಟ್ ಆಗಬೇಕೆಂದರು. ಆದರೆ ನನಗೆ ಅಲ್ಲಿ ಅಡ್ಮಿಟಾಗಲು ಇಷ್ಟವಿರಲಿಲ್ಲ" .
"ಇನ್ನು 25 ದಿನಗಳ ತನಕ ನನ್ನನ್ನು ಭೇಟಿ ಮಾಡಲು ಬರಬೇಡಿ ಎಂದು ರಾಜ್ಯದ ಜನತೆ ಮನವಿ ಮಾಡಿರುವ ಕುಮಾರಸ್ವಾಮಿ ಆರೋಗ್ಯ ಸುಧಾರಿಸಿದ ಬಳಿಕ ನಿಮ್ಮ ಬಳಿ ಬರುತ್ತೇನೆ. ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತೇನೆ "ಎಂದು ತಿಳಿಸಿದರು.
" ತನ್ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದ ಸಿಎಂಗೆ ಕೃತಜ್ಞತೆ ಸಲ್ಲಿಸಿರುವ ಕುಮಾರಸ್ವಾಮಿ “ ಅವರು ನನ್ನ ಬಳಿ ಬರುವ ಬದಲು ಜನರ ಬಳಿ ಹೋಗಬೇಕಿತ್ತು.ರಾಜ್ಯದ ರೈತರು ತುಂಬಾ ಕಷ್ಟದಲ್ಲಿದ್ದಾರೆ. ಅವರನ್ನು ಭೇಟಿ ಮಾಡಬೇಕಿತ್ತು’’ ಎಂದು ಅಭಿಪ್ರಾಯಪಟ್ಟರು
ಶನಿವಾರ ಮೈಸೂರಿನಲ್ಲಿ ದಸರಾದ ಜಂಬೂಸವಾರಿ ಮೆರವಣಿಗೆಯ ಮೊದಲು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ “ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ” ಎಂದು ಹೇಳಿಕೆಗೆ ನೀಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಮುಂದಿನ ವರ್ಷ ದಸರಾ ಯಾರು ಉದ್ಘಾಟಿಸುತ್ತಾರೆಂದು ತಾಯಿ ಚಾಮುಂಡೇಶ್ವರಿ ತೀರ್ಮಾನಿಸುತ್ತಾಳೆ “ ಎಂದು ಹೇಳಿದರು.