×
Ad

ಬೆಂಕಿ ಹಚ್ಚುವುದು ಆರೆಸ್ಸೆಸ್ ಗೆ ರಕ್ತಗತ; ಸಾಮರಸ್ಯ ಮೂಡಿಸುವವರು ನಾವು: ಸಿಎಂ ಸಿದ್ದರಾಮಯ್ಯ

Update: 2017-10-01 19:14 IST

ಚಿತ್ರದುರ್ಗ, ಅ. 1: ಬೆಂಕಿ ಹಚ್ಚುವುದು ಆರೆಸ್ಸೆಸ್ ಗೆ ರಕ್ತಗತವಾಗಿ ಬಂದಿದೆ. ಆದರೆ, ಕಾಂಗ್ರೆಸ್ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ನಗರದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿಯೂ ನಾವೇ ದಸರಾ ಉದ್ಘಾಟನೆ ಮಾಡುತ್ತೇವೆಂದು ಹೇಳಿರುವುದು ನಾನೇ. ಆದರೆ, ನಾನೇ ಮುಂದಿನ ಮುಖ್ಯಮಂತ್ರಿ ಎಂದೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಪಕ್ಷದ ಹೈಕಮಾಂಡ್ ಹಾಗೂ ಶಾಸಕಾಂಗದ ಸದಸ್ಯರು ನಿರ್ಧರಿಸಲಿದ್ದಾರೆ. ಈ ಬಗ್ಗೆ ಯಾರೊಬ್ಬರಿಗೂ ಸಂಶಯ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರದ್ದು ಮನ್ ಕಿ ಬಾತ್. ಆದರೆ, ಈ ಮನ್ ಕೀ ಬಾತ್‌ನಿಂದ ಏನು ಕೆಲಸ ನಡೆಯುತ್ತಿಲ್ಲ. ನಮ್ಮ ಸರಕಾರದ್ದು ಕಾಮ್ ಕೀ ಬಾತ್. ಇದು ಕೇಂದ್ರದ ನಕಲು ಅಲ್ಲ, ಜನರ ಕೆಲಸ ಮಾಡುವುದು ಸರಕಾರದ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಮ್ ಕೀ ಬಾತ್ ಯೋಜನೆ ರೂಪಿಸುತ್ತಿದ್ದೇವೆ ಎಂದರು.

ಸಕಾಲ ಜನರಿಗೆ ಸೇವೆ ನೀಡಲು ತಂದ ಯೋಜನೆ. ಯಾವುದೇ ಕಾರಣಕ್ಕೂ ಸಕಾಲ ಯೋಜನೆಯನ್ನು ಮುಚ್ಚುವುದಿಲ್ಲ. ಜನರಿಗೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಯೋಜನೆಯಲ್ಲಿ ಕೆಲ ಮಾರ್ಪಾಡನ್ನು ತಂದು ಇನ್ನಷ್ಟು ಪರಿಣಾಮಕಾರಿಗೊಳಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಂಸದ ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರೈತರ ಸಾಲ ಮನ್ನಾ ಘೋಷಣೆಯ ಬಳಿಕ ಹಣ ಪಾವತಿ ವಿಳಂಬ ಮಾಡಿಲ್ಲ. ಅಪೆಕ್ಸ್ ಬ್ಯಾಂಕ್ ಸೇರಿದಂತೆ ಯಾವ ಸಹಕಾರ ಸಂಘವೂ ಹಣ ಬಂದಿಲ್ಲ ಎಂದು ಹೇಳಿಲ್ಲ. ಆ ರೀತಿ ಆಗಿದ್ದರೆ ಕೂಡಲೇ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News