×
Ad

ಕೋಲಾರ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತದಲ್ಲಿ ದೇಶಕ್ಕೆ ಮೊದಲ ಸ್ಥಾನ: ರಮೇಶ್‍ಕುಮಾರ್

Update: 2017-10-01 21:50 IST

ಕೋಲಾರ, ಅ.1: ಬಯಲು ಬಹಿರ್ದೇಸೆ ಮುಕ್ತ ಜಿಲ್ಲೆಯಾಗಿ ದೇಶದಲ್ಲೇ ಕೋಲಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈ ಸಾಧನೆಗಾಗಿ ಅಹರ್ನಿಷಿ ದುಡಿದ ಜಿಪಂ ಸಿಇಒ ಬಿ.ಬಿ.ಕಾವೇರಿ ಅಭಿನಂದನೆಗೆ ಅರ್ಹರು ಎಂದು ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಶೌಚಾಲಯಕ್ಕಾಗಿ ಸಮರವನ್ನು ಮಾಡಿ ಸಾಧನೆಗೈದ ಜಿಪಂ ಸಿಇಒ ಅವರಿಗೆ ಕೃತಜ್ಞತೆ ಎಂದ ಅವರು ನಾಳೆ ಸಂಜೆ ವೇಳೆಗೆ ಅಧಿಕೃತ ಪ್ರಕಟನೆ ಹೊರಬೀಳಲಿದೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳು ಬಹುತೇಕ ಬಯಲು ಬಹಿರ್ದೆಸೆ ಮುಕ್ತವಾಗಿವೆ, ಶೌಚಾಲಯ ನಿರ್ಮಾಣ ಶೇ.97 ದಾಟಿದೆ, ಏಳೆಂಟು ಗ್ರಾಮಗಳಲ್ಲಿ ಶೇ.85 ರಷ್ಟು ಸಾಧನೆಯಾಗಿದ್ದು, ಅಲ್ಲಿಯೂ ರಾತ್ರಿಹಗಲು ಕೆಲಸ ಮಾಡುವ ಮೂಲಕ ಶೇ.100 ಮುಟ್ಟಿಸುವ ಕೆಲಸ ಸಾಗಿದೆ ಎಂದರು.

ಸಚಿವರ ಅಭಿನಂದನೆ: ಕೋಲಾರ ಜಿಲ್ಲೆ ಪೋಡಿ ಆಂದೋಲನದಲ್ಲೂ ರಾಜ್ಯದಲ್ಲೇ ನಂ.1 ಆಗಿದೆ, ಶುದ್ಧ ನೀರಿನ ಘಟಕಗಳನ್ನು ಜಾತಿ, ಧರ್ಮ, ಪಕ್ಷ ನೋಡದೇ ನೀಡಲಾಗಿದ್ದು, ಇದರಿಂದ ಪ್ಲೊರೈಡ್ ಸಂಬಂಧಿ ಕಾಯಿಲೆಗಳು ಶೇ.80 ರಷ್ಟು ಕಡಿಮೆಯಾಗಿದೆ ಎಂದರು.

10 ದಿನದೊಳಗೆ ಯರಗೋಳು ಭೇಟಿ: ಜಿಲ್ಲೆಯ ಕುಡಿಯುವ ನೀರಿನ ಯರಗೋಳು ಯೋಜನೆ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ದಿನದೊಳಗೆ ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದು, ಕಾಮಗಾರಿ ಶೀಘ್ರ ಮುಗಿಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲೆಯ ರಾಕ್ಷಸ ಸ್ವರೂಪಿ ಜಾಲಿ, ನೀಲಗಿರಿ ನಿಷೇಧಕ್ಕೆ ಆದೇಶ ಜಾರಿಗೊಳಿಸಲಾಗುತ್ತಿದೆ,  ಕಸ ವಿಲೇವಾರಿಗೆ ಜಾಗ ನೀಡುವಲ್ಲಿ ಅಡ್ಡಿ ಬೇಡ ಎಂದ ಅವರು, ಕಸ ಹಾಕುವ ಜಾಗದಲ್ಲಿ ಕಾಂಪೌಸ್ಟ್ ತಯಾರಿಕಾ ಘಟಕ ಸ್ಥಾಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಉಪಾಧ್ಯಕ್ಷ ಶಿವಶಂಕರರೆಡ್ಡಿ, ಶಾಸಕ ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಉಪಾಧ್ಯಕ್ಷ ನಾಗರಾಜ್, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ ಸೇರಿದಂತೆ ಬ್ಯಾಂಕಿನ ಎಲ್ಲಾ ನಿರ್ದೇಶಕರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News