×
Ad

ಅಂಬೇಡ್ಕರ್ , ಇಂದಿರಾ ವಸತಿ ಶಾಲೆ ನಿರ್ಮಾಣ: ಸಿಎಂ ಸಿದ್ದರಾಮಯ್ಯ

Update: 2017-10-01 22:02 IST

ದಾವಣಗೆರೆ, ಅ.1: ನವೋದಯ ವಸತಿ ಶಾಲೆಗಳ ಮಾದರಿ ಯಲ್ಲೇ ರಾಜ್ಯದ 741 ಹೋಬಳಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಸ್ಥಾಪಿಸಿ, ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಮೈತ್ರಿ ವನದಲ್ಲಿ ರವಿವಾರ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರೊ.ಬಿ.ಕೃಷ್ಣಪ್ಪಟ್ರಸ್ಟ್‌ನಿಂದ ಸ್ಥಾಪಿಸಿರುವ ಪ್ರೊ.ಬಿ.ಕೃಷ್ಣಪ್ಪಸ್ಮಾರಕ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125 ಜಯಂತಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಅಂಗವಾಗಿ ಒಟ್ಟು 741 ವಸತಿ ಶಾಲೆಗಳನ್ನು ನವೋದಯ ವಿದ್ಯಾಲಯ ಮಾದರಿಯಲ್ಲಿ ನಿರ್ಮಿಸಿ, ಗ್ರಾಮೀಣ ಮಕ್ಕಳು, ಕೆಳಸ್ತರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.

ಶಿಕ್ಷಣ, ಸಂಘಟನೆ, ಹೋರಾಟವೆಂಬ ಬಾಬಾ ಸಾಹೇಬ್‌ರ ಘೋಷಣೆಯನ್ನು ಪ್ರೊ.ಬಿ.ಕೃಷ್ಣಪ್ಪರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಿದರು. ಪ್ರೊ.ಕೃಷ್ಣಪ್ಪ ಸ್ಥಾಪಿತ ಡಿಎಸ್ಸೆಸ್ ಇಂದು ಅನೇಕ ಬಣಗಳಾಗಿ, ಒಡೆದು ಹೋಗಿವೆ. ಇತ್ತೀಚೆಗೆ ದಲಿತರ ಸಂಘಟನೆಗಳೆಲ್ಲಾ ಒಕ್ಕೂಟದಡಿ ಒಟ್ಟಾಗಿರುವುದು ಸಮಾ ಧಾನಕರ ಸಂಗತಿ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪಚಿಂತನೆಗಳನ್ನು ಮೈಗೂಡಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ದಲಿತರು ಏನೇ ಕೇಳಿದರೂ ಇಲ್ಲವೆನ್ನದೇ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಅಂಬೇಡ್ಕರ್, ಪ್ರೊ.ಕೃಷ್ಣಪ್ಪ ಕನಸು ನನಸು ಮಾಡಲು ಸಂಕಲ್ಪ ತೊಟ್ಟಿರುವ ಸಿಎಂ ಸಿದ್ದರಾಮಯ್ಯ, ಹಿಂದಿನ ಯಾವುದೇ ಮುಖ್ಯಮಂತ್ರಿ ಮಾಡದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದ ಚಂದ್ರಪ್ಪ, ಇಂದಿರಾ ಕೃಷ್ಣಪ್ಪ, ಶಾಸಕರಾದ ಎಚ್.ಎಸ್.ಶಿವಶಂಕರ್, ಶಿವಮೂರ್ತಿ ನಾಯ್ಕ, ಎಂ.ಪಿ.ರವೀಂದ್ರ, ರಾಜೇಶ್, ಮುಖಂಡರಾದ ರಾಮಪ್ಪ, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News