×
Ad

ಬೆಳೆಗಾರರು ಕಾಫಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು: ಆಸ್ಕರ್ ಫರ್ನಾಂಡೀಸ್

Update: 2017-10-01 22:08 IST

ಚಿಕ್ಕಮಗಳೂರು, ಅ.1: ಹವಾಮಾನ ವೈಪರೀತ್ಯದ ನಡುವೆ ಕಾಫಿ ಉದ್ಯಮ ಮತ್ತು ಬೆಳೆಗಾರರು ಉಳಿಯ ಬೇಕಾದರೆ ಕಾಫಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಸಲಹೆ ನೀಡಿದ್ದಾರೆ.

ರವಿವಾರ ನಗರ ಹೊರವಲಯದ ಹಿರೇಮಗಳೂರು ರೈಲ್ವೇ ಸೇತುವೆ ಸಮೀಪ ಕೆಜಿಎಫ್ ಸೇರಿದಂತೆ ವಿವಿಧ ಕಾಫಿ ಬೆಳೆಗಾರರ ಸಂಘಗಳು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕುಂಠಿತವಾಗಿದ್ದು, ಸಕಾಲಕ್ಕೆ ಬಾರದೇ ರೈತರು ಮತ್ತು ಬೆಳೆಗಾರರು ಪರದಾಡುವಂತಾಗಿದೆ, ಆರಂಭಿಕ ಮಳೆಗಳು ಬೀಳದೆ ಕಾಫಿ ಉತ್ಪಾದನೆ ತಗ್ಗಿದೆ ಎಂದು ನುಡಿದರು.

ಕಾಫಿ ಬೆಳೆಗಾರರು ಹೂಮಳೆಯನ್ನು ನೆಚ್ಚಿಕೊಂಡು ಕೂರಬಾರದು. ತೋಟಗಳಲ್ಲಿ ಬೋರ್‍ವೆಲ್, ಕೆರೆಗಳು ಮತ್ತು ಟ್ಯಾಂಕ್‍ಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಬೇಕು. ಸ್ಟ್ರಿಂಕ್ಲರ್ ಮೂಲಕ ನೀರು ಹಾಯಿಸಿ ಕಾಫಿ ಉತ್ಪಾದನೆಯನ್ನು ಹೆಚ್ಚಿಸಬೇಕು. ತೋಟಗಳಲ್ಲಿ ಕೋಳಿ ಗೊಬ್ಬರವನ್ನು ಬಳಸುವ ಮೂಲಕ ಕಾಫಿ ಗಿಡಗಳಲ್ಲಿ ಹೂಗಳು ಹೆಚ್ಚಿನ ಪ್ರಮಾಣದಲ್ಲಿ ಅರಳುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಕಾಫಿ ಮಂಡಳಿಯನ್ನು ಮುಚ್ಚಲಾಗುತ್ತದೆ ಎನ್ನುವುದು ಕೇವಲ ವಂದತಿ ಮಾತ್ರ. ವಾಸ್ತವಿಕವಾಗಿ ಕಾಫಿ ಮಂಡಳಿಯನ್ನು ಮುಚ್ಚುವ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಫಿ ಬೆಳೆಗಾರರನ್ನೇ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಂಡಳಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಡಿ.ಎಂ.ವಿಜಯ್ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಮನವರಿಕೆ ಮಾಡಿಕೊಡುವ ಮೂಲಕ ಉದ್ಯಮವನ್ನು ಉಳಿಸುವಂತೆ ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಮಾಡಿದ ಅವರು, ಕಾಫಿ ಉದ್ಯಮ ತೀವ್ರ ಸಂಕಷ್ಟದಲ್ಲಿದ್ದಾಗ ಅನೇಕ ಪ್ಯಾಕೇಜ್‍ಗಳನ್ನು ನೀಡುವ ಮೂಲಕ ಬೆಳೆಗಾರರ ಹಿತರಕ್ಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಸ್ಕರ್ ಫರ್ನಾಂಡೀಸ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕಾಫಿ ಉದ್ಯಮದ ಉಳಿವಿಗೆ ಸಾಕಷ್ಟು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್.ರಘು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಜಿಎಫ್ ಉಪಾಧ್ಯಕ್ಷ ಕೆ.ಯು.ರತೀಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಹೆಚ್.ಆರ್.ಲಕ್ಷ್ಮಣಗೌಡ, ಆಸ್ಕರ್ ಫರ್ನಾಂಡೀಸ್ ಅವರ ಪತ್ನಿ ಬ್ಲಾಸಂ ಫರ್ನಾಂಡೀಸ್, ಬಿಗ್‍ಬಾಸ್ ಖ್ಯಾತಿಯ ಕಿರುತೆರೆ ನಟರಾದ ಅಯ್ಯಪ್ಪ, ಶೀತಲ್, ಆಕಾಶ್, ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜೈರಾಂ ಮತ್ತಿತರಿದ್ದರು.

ಬಾಕ್ಸ್‍ನ್ಯೂಸ್: ಕಾಫಿ ಬೆಳೆಗೆ ಹೆಚ್ಚಿನ ಬೆಲೆ ದೊರೆಯಬೇಕಾದರೆ ಬೆಳೆಗಾರರು ಆಂತರಿಕ ಮಾರುಕಟ್ಟೆಯನ್ನು ಬಲಗೊಳಿಸಲು ಚಿಂತಿಸಬೇಕು. ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದಿಂದಾಗಿ ಕಾಳಧನ ಹೊಂದಿದ್ದವರಿಗೆ ತೊಂದರೆಯಾಗಿದೆಯೇ ಹೊರತು ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿಲ್ಲ. ಜಿಎಸ್‍ಟಿಯಿಂದಾಗಿ ಕಾಫಿ ಬೆಳೆಗಾರರಿಗೆ ಈ ಹಿಂದೆ ಹಾಕುತ್ತಿದ್ದ ಸರಕು ಮತ್ತು ಸೇವಾ ತೆರಿಗೆ ಶೇ.12 ರಿಂದ 5ಕ್ಕೆ ಇಳಿದಿದೆ. ಇದರ ಜೊತೆಗೆ ಕಾಫಿ ರಫ್ತಿಗೆ ಶೇ.2 ರಷ್ಟು ಪ್ರೋತ್ಸಾಹ ಧನ ಸಹ ದೊರೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News