×
Ad

ಮಾತೃ ಪೂರ್ಣ ಯೋಜನೆಗೆ 302 ಕೋಟಿ ರೂ. ಮೀಸಲು: ಡಾ.ಆರತಿ ಕೃಷ್ಣ

Update: 2017-10-02 17:41 IST

ಚಿಕ್ಕಮಗಳೂರು, ಅ.2: ರಾಜ್ಯ ಸರ್ಕಾರ ಮಾತೃ ಪೂರ್ಣ ಯೋಜನೆಗೆ 2017-18ನೆ ಸಾಲಿನ ಆಯವ್ಯಯದಲ್ಲಿ 302 ಕೋಟಿ ರೂ. ಹಣವನ್ನು ಮೀಸಲಿರಿಸಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಟಿಎಂಎಸ್ ಶಾಲಾ ಆವರಣದಲ್ಲಿರುವ ಎಂಎಲ್ ವಿ ರೋಟರಿ ಸಭಾಂಗಣದಲ್ಲಿ ಮಾತೃ ಪೂರ್ಣ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಆಶಕ್ತ ಕುಟುಂಬಗಳ ಹೆಣ್ಣು ಮಕ್ಕಳು ಗರ್ಭಿಣಿ ಹಾಗೂ ಬಾಣಂತನದ ಸಂದರ್ಭದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಅವರಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆಯಲ್ಲದೆ ಜನಿಸುವ ಮಕ್ಕಳು ಕೂಡ ಅಪೌಷ್ಟಿಕತೆಯಿಂದ ನರಳುತ್ತಾರೆ. ಇದನ್ನು ಮನಗಂಡ ಸರ್ಕಾರ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಲ್ಲಿ ಕಾಡುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಮಾತೃ ಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಈ ಯೋಜನೆಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕವಾದ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮೂಲಕ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸಿ ಕಡಿಮೆ ತೂಕದ ಮಕ್ಕಳ ಜನನ ಹಾಗೂ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದ ಅವರು, ಗರ್ಭಿಣಿಯರು ಹಾಗೂ ಬಾಣಂತಿಯರು ಈ ಯೋಜನೆಯ ಸದುಪಯೋಗ ಪಡೆಸಿಕೊಳ್ಳುಲು ಮನವಿ ಮಾಡಿದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ಸರ್ಕಾರ ಮಹಿಳೆಯರಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ವಿನೂತನವಾದ ಮಾತೃ ಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ. 8 ತಿಂಗಳ ಒಳಗಿನ ಗರ್ಭಿಣಿ ಸ್ತ್ರೀಯರು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪೌಷ್ಟಿಕ ಊಟವನ್ನು ಮಾಡಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜು ಮಾತನಾಡಿದರು. ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ನಗರಸಭೆ ಅಧ್ಯಕ್ಷ ರವೀಂದ್ರ ಪ್ರಭು, ಜಿ.ಪಂ. ಉಪಕಾರ್ಯದರ್ಶಿ ರಾಜ್ ಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News