×
Ad

ಮಡಿಕೇರಿ: ಬೆಳೆಗಾರರ ಸಂಘದಿಂದ “ಕಾಫಿ ಡೇ” ಆಚರಣೆ

Update: 2017-10-02 17:50 IST

ಮಡಿಕೇರಿ, ಅ.2: ಈಗಾಗಲೇ ದೇಶ ವಿದೇಶದ ಜನರ ಮನಗೆದ್ದಿರುವ ಕೊಡಗಿನ ಸ್ವಾದಿಷ್ಟಕರ ಕಾಫಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಕಾವೇರಿನಾಡಿನ ಕಾಫಿಯ ರುಚಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ.

ಮಡಿಕೇರಿಯಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಂಘದ ಪ್ರಮುಖರು ರುಚಿಕರ ಕಾಫಿ ತಯಾರಿಕೆಯ ಬಗ್ಗೆಯೂ ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದರು.

ಮಡಿಕೇರಿ ದಸರಾ ನೋಡಲು ಬಂದ ಸಾವಿರಾರು ಪ್ರವಾಸಿಗರಿಗೆ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಉಚಿತವಾಗಿ ನೀಡಿದ ಬಿಸಿಬಿಸಿ ಕಾಫಿ, ಮಳೆಯಲ್ಲಿ ನೆನೆದು, ಚುಮುಚುಮು ಚಳಿಯಲ್ಲಿ ನಡುಗುತ್ತಿದ್ದವರ ದಿಲ್‍ಖುಷ್ ಮಾಡಿತು. ನಗರದ ರಾಜಾಸೀಟು ರಸ್ತೆಯ ಕಾಫಿ ಕೃಪಾ ಕಟ್ಟಡದ ಬಳಿ ನಡೆದ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಯಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೊಡಗಿನ ಕಾಫಿಗೆ ಮತ್ತಷ್ಟು ಪ್ರೋತ್ಸಾಹದ ಅಗತ್ಯವಿದ್ದು, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಾರ್ಯವೂ ಆಗಬೇಕಾಗಿದೆ ಎಂದರು. 

ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ಎಂ.ದಿನೇಶ್ ಮಾತನಾಡಿ, ಸ್ವಾದಿಷ್ಟಕರ ಕಾಫಿ ತಯಾರಿಕೆಯ ಕುರಿತು ಮಾಹಿತಿ ನೀಡಿದರು. ಚಿಕೋರಿ ಬಳಕೆಯಿಂದ ಕಾಫಿಯ ನೈಜ ರುಚಿ ಮರೆಯಾಗುತ್ತದೆ ಎಂದು ತಿಳಿಸಿದ ಅವರು, ರುಚಿಕರವಾದ ಕಾಫಿಯನ್ನು ಪರಿಚಯಿಸುವುದರಿಂದಲೇ ಕಾಫಿಯ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕಾಯಪಂಡ ಕೆ.ತಮ್ಮಯ್ಯ, ಕಾರ್ಯದರ್ಶಿ ಶಿವಶಂಕರ್, ಒಕ್ಕೂಟದ ಪದಾಧಿಕಾರಿ ಕೆ.ಕೆ.ವಿಶ್ವನಾಥ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News