ಗ್ರಾಪಂ ಅಧ್ಯಕ್ಷೆ ಮೇಲೆ ಹಲ್ಲೆ ಪ್ರಕರಣ: ಓರ್ವ ಬಂಧನ
Update: 2017-10-02 18:59 IST
ಗುಂಡ್ಲುಪೇಟೆ, ಅ.2: ಕುಡಿಯುವ ನೀರು ವ್ಯತ್ಯಯದ ನೆಪದಲ್ಲಿ ತಾಲೂಕಿನ ಹೊರೆಯಾಲ ಗ್ರಾಪಂ ಅಧ್ಯಕ್ಷೆ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಹೊಸಪುರ ಗ್ರಾಮದ ಶಿವಣ್ಣೇಗೌಡ, ಸಿದ್ದರಾಜು ಹಾಗೂ ನಾಗಮ್ಮ ಎಂಬ ಆರೋಪಿಗಳು ಹೊರೆಯಾಲ ಗ್ರಾಪಂ ಅಧ್ಯಕ್ಷೆ ಸವಿತಾ ಹಾಗೂ ಅವರ ಪತಿ ನಾಗರಾಜು ಹಾಗೂ ಭಾವಮೈದುನ ಮಹದೇವೇಗೌಡ ಎಂಬವರ ತಲೆಗೆ ರಾಡ್ ಹಾಗೂ ದೊಣ್ಣೆಗಳಿಂದ ಹೊಡೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು, ತಲೆಮರೆಸಿಕೊಂಡಿದ್ದ ನಾಗಮ್ಮ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನಿಬ್ಬರ ಪತ್ತೆಗೆ ಕ್ರಮಕೈಗೊಂಡಿರುವುದಾಗಿ ಪಿಎಸ್ಸೈ ಕಿರಣ್ ಕುಮಾರ್ ಹೇಳಿದ್ದಾರೆ.
ಗ್ರಾಪಂ ಅಧ್ಯಕ್ಷೆ ಸವಿತಾ ಪತಿ ನಾಗರಾಜು ಹಾಗೂ ಭಾವಮೈದುನ ಮಹದೇವೇಗೌಡ ಅವರಿಗೆ ತೀವ್ರ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.