×
Ad

ನವ ವಿವಾಹಿತೆ, ಪ್ರಿಯತಮನ ಹತ್ಯೆ ಪ್ರಕರಣ: ಪತಿ ಸೇರಿ ಇಬ್ಬರು ಹಂತಕರ ಬಂಧನ

Update: 2017-10-02 22:34 IST

ಶಿವಮೊಗ್ಗ, ಅ.2: ನವವಿವಾಹಿತೆ ಹಾಗೂ ಈಕೆಯ ಪ್ರಿಯತಮನ ಹತ್ಯೆ ಪ್ರಕರಣ ಭೇದಿಸುವಲ್ಲಿ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಹತ್ಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನವವಿವಾಹಿತೆಯ ಪತಿ ಸೇರಿದಂತೆ ಆತನ ಸ್ನೇಹಿತನನ್ನು ಸೋಮವಾರ ಮುಂಜಾನೆ ನಗರದಲ್ಲಿ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೀಬ್ಬರ ಆರೋಪಿಗಳ ಸೆರೆಗೆ ಶೋಧ ಮುಂದುವರಿಸಿದ್ದಾರೆ.

ಪತಿ ಕಾರ್ತಿಕ್ (28) ಹಾಗೂ ಆತನ ಸ್ನೇಹಿತ ಭರತ್ (25) ಬಂಧಿತ ಆರೋಪಿಗಳಾಗಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳಾದ ಸಂದೀಪ್ ಹಾಗೂ ಸತೀಶ್ ಸೆರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್‌ಸ್ಪೆಕ್ಟರ್ ಮಹಾಂತೇಶ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಗಿರೀಶ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಅ.1ರಂದು ಮಧ್ಯಾಹ್ನ ವಡ್ಡಿನಕೊಪ್ಪಹಾಗೂ ಸಂತೆಕಡೂರು ಗ್ರಾಮಗಳ ನಡುವಿನ ನಿರ್ಜನ ಸ್ಥಳದಲ್ಲಿ, ಇಂದಿರಾನಗರ ಬಡಾವಣೆ ಸಮೀಪದ ಶ್ರೀರಾಮನಗರದ ನಿವಾಸಿಗಳಾದ ನವ ವಿವಾಹಿತೆ ರೇವತಿ (23) ಹಾಗೂ ಆಕೆಯ ಪ್ರಿಯತಮ ವಿಜಯ್ (25) ಎಂಬವರನ್ನು ಹತ್ಯೆ ಮಾಡಲಾಗಿತ್ತು. ರೇವತಿ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ನಡೆಸಲಾಗಿದ್ದರೆ, ವಿಜಯ್ ದೇಹಕ್ಕೆ ಹರಿತವಾದ ಆಯುಧದಿಂದ ಇರಿದು, ನಂತರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಶವಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅನುಮಾನ: ರೇವತಿಯ ವಿವಾಹವು ಕಳೆದ ಒಂದು ತಿಂಗಳ ಹಿಂದಷ್ಟೆ ವೆಂಕಟೇಶ್ ನಗರದ ನಿವಾಸಿಯಾದ ಆಪಾದಿತ ಕಾರ್ತಿಕ್ ಎಂಬಾತನೊಂದಿಗೆ ನಡೆ
ದಿತ್ತು. ಆದರೆ, ರೇವತಿಯು ಮದುವೆಗೂ ಮುಂಚಿತವಾಗಿ ಪ್ರೀತಿಸುತ್ತಿದ್ದ ವಿಜಯ್‌ಎಂಬಾತನೊಂದಿಗೆ ನಾಪತ್ತೆಯಾಗಿದ್ದಳು.

ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ಕರೆತಂದಿದ್ದರು. ರೇವತಿಯನ್ನು ಪತಿಯ ಮನೆಗೆ ಕಳುಹಿಸಿ ಕೊಟ್ಟಿದ್ದರು. ಇತ್ತೀಚೆಗೆ ರೇವತಿಯು ತವರು ಮನೆಯಲ್ಲಿ ತಂಗಿದ್ದಳು. ನಂತರ ಹತ್ಯೆಗೀಡಾದ ಸ್ಥಿತಿಯಲ್ಲಿ ಈ ಇಬ್ಬರ ಶವ ಪತ್ತೆಯಾಗಿದ್ದವು. ಮದುವೆಯಾದ ನಂತರವೂ ರೇವತಿ ತನ್ನ ಹಳೇ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಪ್ರೇಮಿಗಳ ಹತ್ಯೆ ಬಳಿಕ ಪತಿ ಕಾರ್ತಿಕ್ ತಲೆಮರೆಸಿಕೊಂಡಿದ್ದು ಪೊಲೀಸರ ಅನುಮಾನವನ್ನು ಮತ್ತಷ್ಟು ದೃಢಪಡುವಂತೆ ಮಾಡಿತ್ತು. ಇದೀಗ ಈ ಅನುಮಾನ ನಿಜವಾಗಿದ್ದು, ಪ್ರಸ್ತುತ ಪೊಲೀಸರಿಂದ ಬಂಧಿತನಾಗಿರು ಪತಿ ಕಾರ್ತಿಕ್‌ನ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಪತ್ನಿ ರೇವತಿ ಹಾಗೂ ಆಕೆಯ ಪ್ರಿಯತಮ ವಿಜಯ್‌ನನ್ನು ಹತ್ಯೆ ನಡೆಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ತನಿಖೆ ಮುಂದುವರಿಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಬ್ಬರ ಸೆರೆಗೆ ಕ್ರಮಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಚ್ಛೇದನಕ್ಕೆ ನಿರಾಕರಿಸಿದ್ದಳು: ಪತಿ ಕಾರ್ತಿಕ್; ಕಳೆದ ಒಂದು ತಿಂಗಳ ಹಿಂದಷ್ಟೇ ರೇವತಿಗೆ ಕಾರ್ತಿಕ್ ಜೊತೆ ವಿವಾಹವಾಗಿತ್ತು. ವಿವಾಹವಾದ ನಂತರವೂ ಪ್ರಿಯತಮನೊಂದಿಗೆ ಸಂಪರ್ಕ ಮುಂದುವರಿಸಿದ್ದಳು. ಜೊತೆಗೆ ನಾಪತ್ತೆ ಕೂಡ ಆಗಿದ್ದಳು. ಇದು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ರೇವತಿ ಹಾಗೂ ಆತನ ಪ್ರಿಯತಮನನ್ನು ಪತ್ತೆ ಹಚ್ಚಿ ತರುವಲ್ಲಿ ಸಫಲರಾಗಿದ್ದರು. ರೇವತಿಯನ್ನು ಪತಿ ಕಾರ್ತಿಕ್‌ನೊಂದಿಗೆ ಕಳುಹಿಸಿಕೊಟ್ಟಿದ್ದರು.

ಈ ಘಟನೆಯ ನಂತರ ಕಾರ್ತಿಕ್ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಕೊಟ್ಟಿದ್ದ. ತನಗೆ ಡೈವೋರ್ಸ್ ನೀಡಿ ಪ್ರಿಯತಮನ ಜೊತೆ ತೆರಳುವಂತೆ, ಇಲ್ಲದಿದ್ದರೆ ಪ್ರಿಯತಮನ ಸಹವಾಸ ಬಿಟ್ಟು ತನ್ನೊಂದಿಗೆ ಸಂಸಾರ ನಡೆಸುವಂತೆ ರೇವತಿಗೆ ಸೂಚಿಸಿದ್ದ. ಆದರೆ, ರೇವತಿಯು ಡೈವೋರ್ಸ್ ನೀಡಲು ನಿರಾಕರಿಸಿದ್ದಳು. ಜೊತೆಗೆ ಪ್ರಿಯತಮನ ಸಂಪರ್ಕವೂ ಬಿಟ್ಟಿರಲಿಲ್ಲ. ಕಳೆದ ಕೆಲ ದಿನಗಳಿಂದ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಳು ಎಂದು ಕಾರ್ತಿಕ್ ವಿಚಾರಣೆ ವೇಳೆ ತಿಳಿಸಿದ್ದಾನೆಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಇದರಿಂದ ರೋಸಿ ಹೋಗಿದ್ದ ಕಾರ್ತಿಕ್ ರವಿವಾರ ತವರು ಮನೆಯಲ್ಲಿದ್ದ ರೇವತಿಯನ್ನು ದೇವಾಲಯಕ್ಕೆ ತೆರಳುವುದಾಗಿ ಹೇಳಿ ತನ್ನ ಜೊತೆ ಕರೆತಂದಿದ್ದ. ಪತ್ನಿಯ ಮೂಲಕ ಆಕೆಯ ಪ್ರಿಯತಮ ವಿಜಯ್‌ನನ್ನು ಕರೆಯಿಸಿಕೊಂಡಿದ್ದ. ತದನಂತರ ಮಾತುಕತೆ ನಡೆಸುವುದಾಗಿ ನಂಬಿಸಿ ವಡ್ಡಿನಕೊಪ್ಪದ ನಿರ್ಜನ ಪ್ರದೇಶಕ್ಕೆ ಇಬ್ಬರನ್ನು ಕರೆದೊಯ್ದಿದ್ದ. ಪೂರ್ವ ನಿರ್ಧರಿತ ಸಂಚಿನಂತೆ ತನ್ನ ಜೊತೆಯಲ್ಲಿದ್ದ ಮೂವು ಸ್ನೇಹಿತರ ಜೊತೆಗೂಡಿ ವಿಜಯ್ ಹಾಗೂ ರೇವತಿಯ ಹತ್ಯೆ ನಡೆಸಿ ಪರಾರಿಯಾಗಿರುವುದಾಗಿ ಕಾರ್ತಿಕ್ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News