×
Ad

ಮುಂದಿನ ಚುನಾವಣೆ ಕೋಮುವಾದ, ಸಾಮಾಜಿಕ ನ್ಯಾಯದ ನಡುವಿನ ಹೋರಾಟ: ಪ್ರೊ. ರಾಧಾಕೃಷ್ಣ

Update: 2017-10-02 22:54 IST

ತುಮಕೂರು, ಅ.2: ಮುಂಬರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಕೋಮುವಾದ ಮತ್ತು ಸಾಮಾಜಿಕ ನ್ಯಾಯದ ನಡುವಿನ ಹೋರಾಟವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಪ್ರೊ. ರಾಧಾಕೃಷ್ಣ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಆರಂಭದಿಂದಲೂ ಗಾಂಧೀಜಿಯವರ ಜಾತ್ಯಾತೀತ ತತ್ವಗಳ ಮೇಲೆ ನಂಬಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದೆ. ಹಾಗಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿರುವಂತೆ ಮುಂಬರುವ ಚುನಾವಣೆ ಯುದ್ಧವಲ್ಲ.ಅದು ಕೋಮುವಾದ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ನಡುವಿನ ಹೋರಾಟವೆಂದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಿಂತ ಕಾಯಕತ್ವಕ್ಕೆ ಹೆಚ್ಚಿನ ಬೆಲೆ ಇದೆ. ಇದಕ್ಕೆ ಈ ಹಿಂದಿನ ಹಲವಾರು ಘಟನೆಗಳು ನಿರ್ದಶನವಾಗಿವೆ. ಸಚಿವರು, ಶಾಸಕರು,ಜಿಪಂ, ತಾಪಂ ಸದಸ್ಯರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಜಿಲ್ಲಾ ಕಾಂಗ್ರೆಸ್‍ನ ಎಲ್ಲಾ ನಾಯಕರು, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗುಟ್ಟು ಪ್ರದರ್ಶಿಸುವುದರ ಜೊತೆಗೆ, ಎಲ್ಲ ಮತದಾರರ ವಿಶ್ವಾಸಗಳಿಸುವ ಕೆಲಸವನ್ನು ಕೆಪಿಸಿಸಿ ಅಣತಿಯಂತೆ ಮಾಡಲಾಗಿದೆ ಎಂದು ಹೇಳಿದರು.

ನವೆಂಬರ್ 19 ರಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ 100ನೆ ಜನ್ಮ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಕೇಂದ್ರದ ಮೋದಿ ನೇತೃತ್ವದ ಎನ್ ಡಿಎ ಸರಕಾರ ಅರ್ಥಶಾಸ್ತ್ರದ ಜ್ಞಾನವಿಲ್ಲದೆ ತೆಗೆದುಕೊಂಡು ನೋಟು ಅಮಾನ್ಯೀಕರಣ ಹಾಗೂ ಜಿಎಸ್ ಟಿ ಯಿಂದ ಇಡೀ ದೇಶದ ಅರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಆದ ಲಾಭ, ನಷ್ಟದ ಬಗ್ಗೆ ಇದುವರೆಗೂ ಸರಕಾರ ಮಾಹಿತಿ ನೀಡಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚುನಾವಣೆ ಇನ್ನೂ ಆರು ತಿಂಗಳು ಬಾಕಿ ಇದೆ.ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ಮಾಡಲಾಗುವುದು. ನಮ್ಮಲಿ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತ್ರ ಆಯ್ಕೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಲು ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಮೊದಲು ಕಾಂಗ್ರೆಸ್ ಬಹುಮತ ಪಡೆಯಲು ಪ್ರಯತ್ನಿಸುತ್ತೇವೆ. ತದನಂತರ ಮುಖ್ಯಮಂತ್ರಿ ಪಟ್ಟದ ವಿಚಾರ. ಆ ಬಗ್ಗೆ ಯಾವುದೇ ಗೊಂದಲ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ದೇಶದ ಜನರಿಗೆ ನಾನಾ ರೀತಿಯ ಆಶ್ವಾಸನೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಅವರಿಂದ ಕನಿಷ್ಠ ಗ್ಯಾಸ್ ಮತ್ತು ಇಂಧನದ ಬೆಲೆ ನಿಯಂತ್ರಣದಲ್ಲಿಡಲು ಸಾಧ್ಯವಾಗಿಲ್ಲ. 2013ರಲ್ಲಿ 280 ರೂ ಇದ್ದ ಅಡುಗೆ ಅನಿಲ ಈಗ 700 ರೂ ಮೀರಿದೆ, ಇಂಧನ ಬೆಲೆ 50 ರೂ.ನಿಂದ 72 ರೂ.ಗೆ ಹೆಚ್ಚಾಗಿದೆ. ಸ್ವಿಸ್ ಬ್ಯಾಂಕ್‍ನಲ್ಲಿ ಕಪ್ಪು ಹಣ ಇದುವರೆಗೂ ನಾಗರಿಕರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಕೇಂದ್ರ ಸರಕಾರಕ್ಕೆ ಮುಂದಾಲೋಚನೆಯೇ ಇಲ್ಲದಂತಾಗಿದೆ. ಸಾಲಮನ್ನಾಕ್ಕೆ ಆಗ್ರಹಿಸುತ್ತಿದ್ದ ಬಿಜೆಪಿ ನಾಯಕರಿಗೆ ನಿಜವಾಗಿಯೂ ದೇಶದ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಕಿ ಕೇಂದ್ರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 43 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಗುಬ್ಬಿಯ ಶ್ರೀಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಕುಮಾರ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಪ್ರೊ.ರಾಧಾಕೃಷ್ಣ ಮತ್ತಿತರ ಮುಖಂಡರು ಕುಮಾರ್ ಅವರಿಗೆ ಪಕ್ಷದ ಶಲ್ಯ ಮತ್ತು ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಾ.ರಫೀಕ್ ಅಹಮದ್,ಮಾಜಿ ಶಾಸಕ ಇ.ನಂಜೇಗೌಡ, ಸಿ.ಶಿವಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News