×
Ad

ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರದ ಕೊರತೆ ನೀಗಿಸುವಲ್ಲಿ 'ಮಾತೃಪೂರ್ಣ' ಯೋಜನೆ ಸಹಕಾರಿ: ಸಚಿವ ಮಲ್ಲಿಕಾರ್ಜುನ

Update: 2017-10-02 23:36 IST

ದಾವಣಗೆರೆ, ಅ.2: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಮಾತೃಪೂರ್ಣ' ಯೋಜನೆಯು ಆರೋಗ್ಯಯುಕ್ತ ಮಕ್ಕಳ ಜನನಕ್ಕೆ ಮತ್ತು ಪೌಷ್ಟಿಕಾಂಶ ಆಹಾರದ ಕೊರತೆ ನೀಗಿಸುವಲ್ಲಿ ಅತ್ಯಂತ ಸಹಾಯಕವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ಸಾಹಿತ್ಯ ಕಲಾಭವನದಲ್ಲಿ ಆಯೋಜಿಸಲಾಗಿದ್ದ 'ಮಾತೃ ಪೂರ್ಣ' ಯೋಜನೆಯನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕಾಂಶ ಬಿಸಿಯೂಟ ಬಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿರಾಗಾಂಧಿ ಸರ್ಕಾರದಲ್ಲಿ ಈ ಹಿಂದೆ ಕೂಡ ಮಾತೃ ಪೂರ್ಣ ಯೋಜನೆ ಜಾರಿ ಮಾಡಿತ್ತು. ಅದನ್ನು ಮತ್ತಷ್ಟು ಪುಷ್ಠೀಕರಿಸಿ, ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಪೌಷ್ಟಿಕಾಂಶ ಬಿಸಿಯೂಟ ನೀಡುವ ಹೊಸ ರೂಪದಲ್ಲಿ ಯೋಜನೆ ಜಾರಿ ಮಾಡಿದೆ. ಬಿಸಿಯೂಟದಲ್ಲಿ ತೊಗರಿಬೇಳೆ, ಅಕ್ಕಿ, ಎಣ್ಣೆ, ಹಾಲು, ಮೊಟ್ಟೆ, ತರಕಾರಿ ಜೊತೆಗೆ ಕಬ್ಬಿಣಾಂಶದ ಮಾತ್ರೆ ಸೇವಿಸಲು ಬೆಂಬಲ ನೀಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

ಮಾತೃ ಪೂರ್ಣ ಯೋಜನೆಗೆ ಅಂಗನವಾಡಿ ಕಾರ್ಯಕರ್ತರರು ಅಗತ್ಯವಿದ್ದು, ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಸರ್ಕಾರ ಈವರೆಗೂ ಸಾಧ್ಯವಾದಷ್ಟು ಮಟ್ಟದಲ್ಲಿ ಈಡೇರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಪೂರೈಸುವಲ್ಲಿ ಸರ್ಕಾರ ಸಿದ್ಧವಾಗಿದೆ. ಅಂಗನವಾಡಿ ಕಾರ್ಯಕರ್ತರ ವೇತನ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಪಾಲು ಇಲ್ಲ. ರಾಜ್ಯ ಸರ್ಕಾರದ ಮೇಲೆಯೇ ಹೆಚ್ಚಿನ ಹೊರೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಇದೊಂದು ಬಡಜನರಿಗೆ ಅರ್ಥಪೂರ್ಣ ಹಾಗೂ ಹೆಚ್ಚು ಉಪಯುಕ್ತ ಯೋಜನೆ. ಬಡವರ ಮಕ್ಕಳು ಆರೋಗ್ಯವಾಗಿ ಹುಟ್ಟಲು ಗರ್ಭಿಣಿಯರು ಯೋಜನೆ ಸಮಪರ್ಕವಾಗಿ ಬಳಸಿಕೊಳ್ಳಬೇಕು. ಪೌಷ್ಟಿಕಾಂಶ ಆಹಾರದ ಜೊತೆ ಕಾಲ ಕಾಲಕ್ಕೆ ವೈದ್ಯರ ತಪಾಸಣೆ, ಸಲಹೆ-ಸೂಚನೆಗಳು ಸಹ ಇರುತ್ತವೆ. ಈ ಯೋಜನೆಯ ಅನುಷ್ಠಾನದಿಂದ ಅಪೌಷ್ಟಿಕಾಂಶ ಕೊರತೆಯ ಮಕ್ಕಳ ಜನನ ಕಡಿಮೆಯಾಗುತ್ತದೆ ಎಂದು ಹೇಳಿದರು.

ದಾವಣಗೆರೆ ಮಹಾನಗರಪಾಲಿಕೆ ಮಹಾಪೌರರಾದ ಅನಿತಾಬಾಯಿ ಮಾಲತೇಶ್ ಮಾತನಾಡಿ, ನಮ್ಮ ಸರ್ಕಾರ ಬಡಜನರಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ,  ಇಂದಿರಾ ಕ್ಯಾಂಟೀನ್‍ನಂತಹ ಅನೇಕ ಜನಪರವಾದ ಯೋಜನೆ ರೂಪಿಸಿದೆ. ಗರ್ಭಿಣಿ ಹೆಣ್ಣುಮಕ್ಕಳಿಗಾಗಿ ಪೌಷ್ಟಿಕಾಂಶ ಬಿಸಿಯೂಟ ಯೋಜನೆ ಮಾತೃ ಪೂರ್ಣ ಯೋಜನೆ ರಾಜ್ಯದ್ಯಾಂತ ಇಂದು ಉದ್ಘಾಟಿಸಲಾಗಿದೆ ಎಂದು ವಿವರಿಸಿದರು.

ಈ ವೇಳೆ ಶಿಕ್ಷಣ ಇಲಾಖೆಯಿಂದ ಪಿಯುಸಿ ತರಗತಿಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ. ಜಾತಿಯ ವಿಧ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯ್‍ಕುಮಾರ್ ಪ್ರಾಸ್ತವಿಕ ಮಾತನಾಡಿದರು.
ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಪಾಲಿಕೆ ಉಪಮಹಾಪೌರರಾದ ಮಂಜುಳಮ್ಮ, ಎಪಿಎಂಸಿ ಅಧ್ಯಕ್ಷ ಮುದ್ದೇಗೌಡ್ರ ಗೀರಿಶ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಮಚಂದ್ರಪ್ಪ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News