ಧಾರಾಕಾರ ಮಳೆಗೆ ದಾವಣಗೆರೆ ತತ್ತರ
ದಾವಣಗೆರೆ, ಅ.3: ಸೋಮವಾರ ರಾತ್ರಿ ದೇವನಗರಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ಕೆರೆಕಟ್ಟೆಗಳಲ್ಲಿ ಮಳೆ ನೀರು ತುಂಬಿ ಹುಕ್ಕಿ ಹರಿದವು.
ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಸತತ 8 ತಾಸು ಎಡೆಬಿಡದೇ ಸುರಿಯಿತು. ಮಳೆ ಸುರಿದಂತೆಲ್ಲಾ ಗುಡುಗು, ಮಿಂಚು, ಸಿಡಿಲಿನ ಅಬ್ಬರದಿಂದಾಗಿ ಮಳೆಯ ರುದ್ರ ನರ್ತನಕ್ಕೆ ನಗರ, ಪಟ್ಟಣ, ಗ್ರಾಮೀಣ ಜನರು ಕಂಗಾಲಾದರು. ರಾತ್ರೋರಾತ್ರಿ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್‍ನ ಹೊಲ, ಗದ್ದೆಗಳು ಜಲಾವೃತವಾಗಿದ್ದು, ಸಾಗರೋಪಾದಿಯಲ್ಲಿ ಮಳೆ ನೀರು ಹಳ್ಳ, ಕೊಳ್ಳ, ಚೆಕ್ ಡ್ಯಾಂಗಳಲ್ಲಿ ತುಂಬಿ ಹರಿಯುತ್ತಿವೆ. ಕೆರೆಗಳು ತುಂಬಿ ಕೋಡಿ ಬಿದ್ದುಹರಿಯುತ್ತಿವೆ.
ಭಾರೀ ಮಳೆಯಿಂದಾಗಿ ನಗರದ ಬಹುತೇಕ ತಗ್ಗು ಪ್ರದೇಶಗಳು, ರಾಜ ಕಾಲುವೆ ಸುತ್ತಲಿನ ಪ್ರದೇಶ, ಕೊಳಗೇರಿಗಳು, ಆಶ್ರಯ ಕಾಲನಿಗಳು, ಹೊಸ ಬಡಾವಣೆಗಳು ರಾತ್ರೋರಾತ್ರಿ ಜಲಾವೃತವಾದ ಪರಿಣಾಮ ಜನರು ತೀವ್ರವಾಗಿ ಪರದಾಡಬೇಕಾಯಿತು. ಅಲ್ಲದೆ, ಇಲ್ಲಿನ ಸರಸ್ವತಿ ಬಡಾವಣೆ, ಜಯ ನಗರ, ನಿಟುವಳ್ಳಿ ಕರಿಯಮ್ಮ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ, ಬನಶಂಕರಿ ಬಡಾವಣೆ, ವಿದ್ಯಾನಗರ, ಆಜಾದ್ ನಗರ, ನೀಲಮ್ಮನ ತೋಟ, ಭಾರತ ಕಾಲನಿ, ಚಿಕ್ಕನಹಳ್ಳಿ, ಬಸಾಪುರ, ಬಾಷಾ ನಗರ, ಗಾಂಧಿ ನಗರ, ಆಶ್ರಯ ಕಾಲನಿಗಳು ಸಂಪೂರ್ಣ ಜಲಾವೃತವಾಗಿದ್ದವು. ಕುಂದುವಾಡ, ಶಾಬನೂರು, ನಾಗನೂರು, ಜರೀಕಟ್ಟೆ, ಬೇತೂರು, ಮಾಗಾನಹಳ್ಳಿ, ಯರಗುಂಟೆ ಭಾಗವೂ ಜಲಾವೃತವಾಗಿದ್ದರಿಂದ ರಾತ್ರಿ ಪೂರ್ತಿ ಜನ ತೊಂದರೆಗೀಡಾದರು.
ಅಗ್ನಿ ಶಾಮಕ ಇಲಾಖೆ ಆವರಣ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ನೀರನ್ನು ಹೊರಹಾಕಲು ಸಿಬ್ಬಂದಿಗಳು ನಾಲ್ಕು ಅಗ್ನಿಶಾಮಕ ವಾಹನ ಬಳಕೆ ಮಾಡಿಕೊಂಡಿದ್ದರು. ಹೊಸ ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶ ಜಲಮಯವಾಗಿತ್ತು. ಇದೇ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಅಗ್ನಿಶಾಮಕ ದಳದ ಕಚೇರಿ ಪ್ರದೇಶ, ಕ್ವಾಟ್ರರ್ಸ್ ಸಂಪೂರ್ಣವಾಗಿ ಜಲಾವೃತವಾಗಿದ್ದವು.
ಬೇತೂರು ಹಳ್ಳಕ್ಕೆ ಕಟ್ಟಲಾದ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ದಾವಣಗೆರೆ- ಹರಪನಹಳ್ಳಿ ಸಂಪರ್ಕ ಕಡಿತವಾಗಿತ್ತು. ಬಸ್ ಚಾಲಕರು ಸಂಚರಿಸಲು ದುಸ್ಸಾಹಸಪಟ್ಟರು. ರಸ್ತೆ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಸಾಲು ಸೇತುವೆ ಎರಡು ಬದಿ ನಿಂತಿದ್ದವು.
ಮೇಯರ್ ಭೇಟಿ: ಮೇಯರ್ ಅನಿತಾಬಾಯಿ ಅವರು ಜಧವ್ ನಗರದ ಬೂದಿಹಾಳ್ ರಸ್ತೆ ಸೇರಿದಂತೆ ಕೆಲ ಪ್ರದೇಶಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಕುರಿತು ಮಾಹಿತಿ ಕಲೆಹಾಕಿ, ಅಗತ್ಯವಿರುವ ಕಡೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ದಾವಣಗೆರೆ ನಗರದಲ್ಲಿ ಸುಮಾರು 63 ಕೋಟಿ ರೂ. ಮೌಲ್ಯ ದ ಆಸ್ತಿ ಪಾಸ್ತಿ ಹಾನಿಯಾಗಿದೆ. ಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತೀವ್ರ ತೊಂದರೆ ಆಗಿರುವ ಜನಕ್ಕೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.