ಪ್ರತೀ ಕುಟುಂಬ ಬ್ಯಾರಿ ಭಾಷಾ ಉಳಿವಿಗಾಗಿ ಕೈಜೋಡಿಸಬೇಕು: ಕೆ.ಮೊಹಮ್ಮದ್
ಚಿಕ್ಕಮಗಳೂರು, ಅ.3: ಬ್ಯಾರಿ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡುತ್ತಿದ್ದು, ಇದನ್ನು ಬ್ಯಾರಿ ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕೆಂದು ಬ್ಯಾರಿ ಒಕ್ಕೂಟದ ಅಧ್ಯಕ್ಷರ ಹಾಗೂ ಮಾಜಿ ಜಿಪಂ ಅಧ್ಯಕ್ಷ ಕೆ. ಮೊಹಮ್ಮದ್ ತಿಳಿಸಿದ್ದಾರೆ.
ಮಂಗಳವಾರ ನಗರದ ಜಿಲ್ಲಾ ಬ್ಯಾರಿ ಒಕ್ಕೂಟದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾರಿ ಭಾಷೆಯ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಭಾಷಾ ಅಧ್ಯಯನ ಕೇಂದ್ರವನ್ನು ಈ ವರ್ಷ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತಿರುವುದಾಗಿ ಹೇಳಿದರು.
ಬ್ಯಾರಿ ಭಾಷಾ ಉಳಿವಿಗಾಗಿ ಪ್ರತೀ ಕುಟುಂಬಗಳು ಕೈಜೋಡಿಸಬೇಕು. ಹಲವು ಪ್ರಾದೇಶಿಕ ಭಾಷೆಗಳು ಅಳಿವಿನಂಚಿನಲ್ಲಿದೆ. ಇದನ್ನು ಬ್ಯಾರಿ ಸಮುದಾಯದವರು ಮನಗಾಣಬೇಕು. ತಮ್ಮ ಸಂಸ್ಕೃತಿ ಹಾಗೂ ಭಾಷಾ ಸಂಸ್ಕಾರವನ್ನು ಉಳಿಸಲು ಮತ್ತು ಬ್ಯಾರಿ ಭಾಷೆಯನ್ನು ಮುಂದಿನ ಪೀಳಿಗೆಗಾಗಿ ಸಮುದಾಯದವರು ಜಾಗೃತರಾಗಬೇಕೆಂದು ಕರೆ ನೀಡಿದರು.
ಕಾಋ್ಯಕ್ರಮದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಸಿ.ಎಸ್.ಖಲಂದರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್.ನೂರ್ ಮೊಹಮ್ಮದ್, ಕಾರ್ಯದರ್ಶಿ ಬಿ.ಎಚ್.ಹುಸೈನ್ ಶೆರೀಫ್, ಮುಖಂಡರುಗಳಾದ ರಹೀಂಶೇಕ್ ಬ್ಯಾರಿ, ಬಿ.ಎಚ್.ಇಸ್ಮಾಯೀಲ್, ತಾಲೂಕು ಅಧ್ಯಕ್ಷ ಬಿ.ಎಸ್.ಮೊಹಮ್ಮದ್, ರಹಮತ್ ಉಲ್ಲಾ, ಮೊಹಮ್ಮದ್ ಆಲಿ ಉಪಸ್ಥಿತರಿದ್ದರು.