×
Ad

ಮಳೆ ನೀರು ಸಂಗ್ರಹಿಸಿ ಬೆಳೆ ಬೆಳೆಯಿರಿ: ಕೃಷ್ಣ ಭೈರೇಗೌಡ

Update: 2017-10-03 22:40 IST

ಮೈಸೂರು, ಅ.3: ಹವಾಮಾನದ ವೈಪರಿತ್ಯದಿಂದ ಮಳೆ ಸರಿಯಾದ ಸಮಯದಲ್ಲಿ ಆಗುತ್ತಿಲ್ಲ. ಮಳೆ ಬಂದ ಸಂದರ್ಭದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕೃಷಿಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಕೃಷಿಭಾಗ್ಯ ಯೋಜನೆಯಡಿ ಇರುವ ಕೃಷಿ ಹೊಂಡಗಳನ್ನು ರೈತರು ನಿರ್ಮಿಸಿಕೊಳ್ಳುವಂತೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಸಲಹೆ ನೀಡಿದ್ದಾರೆ.

ಜಯಪುರ ಹೋಬಳಿಯ ಮಾವಿನಹಳ್ಳಿಯಲ್ಲಿ ಶ್ರೀ ಶಿವಣ್ಣೇಗೌಡರ ಜಮೀನಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರೈತರೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ರಾಜ್ಯದಲ್ಲಿ ಶೇ.70 ರಷ್ಟು ರೈತರು ಮಳೆ ಅವಲಂಬಿಸಿ ವ್ಯವಸಾಯ ನಡೆಸುತ್ತಿದ್ದಾರೆ. ವರ್ಷದಲ್ಲಿ ಸರಾಸರಿ 65 ದಿನಗಳು ಮಳೆಯಾಗುತ್ತದೆ. ಮಳೆ ಸರಿಯಾದ ಸಮಯದಲ್ಲಿ ಆಗುತ್ತಿಲ್ಲ. ಮಳೆ ಬಿದ್ದಂತಹ ಸಂದರ್ಭದಲ್ಲಿ ಮಳೆಯನ್ನು ಸಂಗ್ರಹಿಸಿಕೊಳ್ಳಬೇಕು. ಮಳೆ ಬಿದ್ದ ತಕ್ಷಣ ರೈತರು ಬಿತ್ತನೆ ಮಾಡುತ್ತಾರೆ. ಬಿತ್ತನೆಯ ನಂತರ ಬೇಕಿರುವ ಮಳೆ ನೀರಿನ ಬಗ್ಗೆ  ಚಿಂತಿಸಬೇಕು. ಮಾವಿನಹಳ್ಳಿಯಲ್ಲಿ ಶಿವಣ್ಣೇಗೌಡರು ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ಇದರಲ್ಲಿ ಬರುವ ನೀರಿನಿಂದ ರಾಗಿ, ಟೊಮೆಟೋ ಮುಂತಾದ ತರಕಾರಿ ಬೆಳೆಗಳನ್ನು ಐದು ಎಕರೆ ಜಮೀನಿನಲ್ಲಿ ಬೆಳೆದು ತಿಂಗಳಿಗೆ 3 ರಿಂದ 3.5 ಲಕ್ಷ ಆದಾಯ ಗಳಿಸುತ್ತಿದ್ದಾರೆ ಎಂದರು.
   
ಹಣ ಇದ್ದರೆ ಬಂಗಾರವನ್ನು ಖರೀದಿಸಬಹುದು ಮಳೆ ಬಾರದಿದ್ದಾರೆ ಹಣ ನೀಡಿದರು ನೀರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ನೀರಿನ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ರೈತರಿಗೆ ಪರಿಹಾರವಾಗಿ ಹಣ ನೀಡಬಹುದು ಇದು ಸರ್ಕಾರದ ಉದ್ದೇಶವಲ್ಲ ರೈತ ತನ್ನ ಜಮೀನಿನಲ್ಲಿ ಬೇಸಾಯ ನಡೆಸಿ ಜೀವನ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಕೃಷಿ ಹೊಂಡ ನಿರ್ಮಾಣಕ್ಕಾಗಿ 1 ರಿಂದ 1.5 ಲಕ್ಷ ರೂ. ಬಂಡವಾಳವನ್ನು ರೈತರಿಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ 3500 ಕೃಷಿ ಹೊಂಡಗಳಿವೆ. ಕೃಷಿ ಹೊಂಡಗಳಿಗಾಗಿ ರೈತರು ಕೃಷಿ ಇಲಾಖೆಗೆ ಬೇಡಿಕೆ ಸಲ್ಲಿಸಿದರೆ ಕೃಷಿ ಹೊಂಡಕ್ಕೆ ಬೇಕಾಗುವ ಅನುದಾನವನ್ನು ನೀಡಲಾಗುವುದು. ಕೃಷಿ ಹೊಂಡದ ಜೊತೆಯಲ್ಲಿ ಹನಿ  ಹಾಗೂ ಸಿಂಚನ ನೀರಾವರಿಯನ್ನು ಅಳವಡಿಸಿಕೊಳ್ಳಿ. ಹನಿ ನೀರಾವರಿಗೆ ಶೇ 90 ರಷ್ಟು ಸಹಾಯಧನ ನೀಡಲಾಗುವುದು. ಡೀಸಲ್ ಪಂಪ್‍ಸೆಟ್ ವೈಯಕ್ತಿಕವಾಗಿ ಖರೀದಿಸಿದರೆ ಶೇ 50 ರಷ್ಟು ಸಹಾಯಧನ ಹಾಗೂ ಗುಂಪಾಗಿ ಖರೀದಿಸಿದರೆ ಶೇ. 100 ರಷ್ಟು ಸಹಾಯಧನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆಯುಕ್ತರಾದ ಡಾ. ಸತೀಶ್ ಅಪರ ಕೃಷಿ ನಿರ್ದೇಶಕ ಡಾ. ಗಂಗಪ್ಪ, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಉಪಸ್ಥಿತರಿದ್ದರು.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News