×
Ad

ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಎಸ್ಪಿ ನೇತೃತ್ವದಲ್ಲಿ ದಾಖಲೆ ಪರಿಶೀಲನೆ

Update: 2017-10-03 23:43 IST

ತುಮಕೂರು, ಅ.3: ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಸೋಮವಾರ ಸ್ವಯಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ರಸ್ತೆಗಿಳಿದು ದಾಖಲಾತಿಗಳ ಪರಿಶೀಲನೆ ನಡೆಸಿದರು.

ಸಂಚಾರ ದಟ್ಟಣೆಯ ಜೊತೆ ಸಂಚಾರಿ ನಿಯಮಗಳ ಉಲ್ಲಂಘನೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆಗೆ ಎಸ್ಪಿ ಡಾ.ದಿವ್ಯಾ ಗೋಪಿನಾಥ್ ನೇತೃತ್ವದ ಅಧಿಕಾರಿಗಳ ತಂಡ ಮುಂದಾಗಿದೆ.

ನಗರದ ಬಿ.ಎಚ್.ರಸ್ತೆ ಆರಂಭವಾಗುವ ಬಟವಾ ಡಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅವರು, ಸಂಚಾರಿ ನಿಯಮದ ಪ್ರಕಾರ ವಿಶೇಷವಾಗಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್, ವಾಹನ ಚಾಲನಾ ಪರವಾನಿಗೆ, ಆರ್‌ಸಿ ಬುಕ್, ವಾಯು ಮಾಲಿನ್ಯ ತಪಾಸಣಾ ದೃಢೀಕರಣ ಪತ್ರ ಸೇರಿದಂತೆ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದು, ದಾಖಲೆಯಿಲ್ಲದ ಸುಮಾರು 200ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಲ್ಮೇಟ್ ಧರಿಸದೆ ವಾಹನ ಚಲಾವಣೆ ಸೇರಿದಂತೆ ಯಾವುದೇ ರೀತಿಯ ಸಂಚಾರಿ ನಿಯಮ ಉಲ್ಲಂಘನೆಗೂ ಕೇಸು ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಸಂಚಾರಿ ಠಾಣೆಯ ಪಿಎಸ್‌ಐ ವಿಜಯಲಕ್ಷ್ಮೀ, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News