ಗೌರಿ ಲಂಕೇಶ್ ಹತ್ಯೆ: ಕೇಂದ್ರಕ್ಕೇನೂ ಪಾತ್ರವಿಲ್ಲವೇ?

Update: 2017-10-03 18:42 GMT

ಗೌರಿ ಲಂಕೇಶ್ ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಗೌರಿಯನ್ನು ಕೊಲ್ಲುವ ಮೂಲಕ ದೇಶದ ಪ್ರಗತಿಪರ ಹೋರಾಟಗಳನ್ನು ದಮನಿಸಬಹುದು ಎಂದು ಯೋಚಿಸಿದವರಿಗೆ ಭಾರೀ ಹಿನ್ನಡೆಯಾಗಿದೆ. ಗೌರಿ ಸಾಯದೇ, ದೇಶದ ಸಹಸ್ರಾರು ಯುವಕ, ಯುವತಿಯರ ಮೂಲಕ ಮರು ಹುಟ್ಟು ಪಡೆದಿದ್ದಾರೆ. ಗೌರಿಯ ಪರವಾಗಿ ಚಳವಳಿ ನಡೆಯುತ್ತಿರುವುದು ಬರೇ ಕರ್ನಾಟಕದಲ್ಲಿ ಮಾತ್ರವಲ್ಲ. ದಿಲ್ಲಿ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜನರು ದಂಗೆಯೆದ್ದಿದ್ದಾರೆ. ಗೌರಿಯ ಹಂತಕರ ಪತ್ತೆಯಾಗಬೇಕು ಎಂದು ಹೋರಾಟಕ್ಕಿಳಿದಿದ್ದಾರೆ.

ಗೌರಿ ಹತ್ಯೆ ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದೇ ಸಂದರ್ಭದಲ್ಲಿ, ‘ಗೌರಿಯ ಹತ್ಯೆ ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟದ್ದಲ್ಲ, ಅದು ರಾಜ್ಯ ಸರಕಾರದ ಕಾನೂನು ವೈಫಲ್ಯದಿಂದ ಉಂಟಾಗಿರುವುದು’ ಎಂಬ ಹೇಳಿಕೆಗಳ ಮೂಲಕ ಕೇಂದ್ರ ಸರಕಾರ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದೆ. ದೇಶಾದ್ಯಂತ ಕೇಂದ್ರವನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಯುತ್ತಿರುವಾಗ ‘ಇದರಲ್ಲಿ ಕೇಂದ್ರದ ಪಾತ್ರ ಏನಿದೆ?’ ಎಂಬ ಪ್ರಶ್ನೆಯನ್ನು ಮೋದಿ ಬೆಂಬಲಿಗರು ಕೇಳುತ್ತಿದ್ದಾರೆ. ಮೇಲ್ನೋಟಕ್ಕೆ ಇವರ ತರ್ಕ ಸರಿಯಿರಬಹುದು. ಕಲಬುರ್ಗಿಯ ಹತ್ಯೆಯ ತನಿಖೆ ನಡೆಸುತ್ತಿರುವುದು ರಾಜ್ಯ ಸರಕಾರ. ಆ ತನಿಖೆಯನ್ನು ಪೂರ್ಣಗೊಳಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಇದೀಗ ಗೌರಿ ಹತ್ಯೆ ನಡೆದಿರುವುದು ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರವಿರುವ ರಾಜ್ಯದಲ್ಲಿ. ಅದರಲ್ಲೂ ತನ್ನನ್ನು ತಾನು ಪ್ರಗತಿಪರ ಎಂದು ಘೋಷಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವ ರಾಜ್ಯದಲ್ಲಿ.

ಆದುದರಿಂದ ಹತ್ಯೆಯ ಎಲ್ಲಾ ಹೊಣೆಗಳನ್ನು ರಾಜ್ಯ ಸರಕಾರವೇ ವಹಿಸಿಕೊಳ್ಳಬೇಕು. ಪ್ರತಿಭಟನಾಕಾರರೆಲ್ಲರೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಬೇಕು, ಕೇಂದ್ರದಿಂದ ಏನನ್ನೂ ನಿರೀಕ್ಷಿಸಬಾರದು ಎನ್ನುವುದು ಮೋದಿ ಭಕ್ತರ ತರ್ಕ. ಈ ತರ್ಕ ಸಂಪೂರ್ಣ ಅಲ್ಲಗಳೆಯುವಂತಹದೇನೂ ಅಲ್ಲ. ಸಿದ್ದರಾಮಯ್ಯ ಸರಕಾರದ ಹೊಣೆಗಾರಿಕೆ ಅತ್ಯಂತ ದೊಡ್ಡದು. ರಾಜ್ಯವೂ ಸೇರಿದಂತೆ ಈ ದೇಶದ ಕೋಮುವಾದಿಗಳ ವಿರುದ್ಧ ಕಾಂಗ್ರೆಸ್ ಮಾತನಾಡಿದ್ದು ತೀರಾ ಕಡಿಮೆ. ಬೀದಿಗಿಳಿದು ಸಂಘಪರಿವಾರದ ವಿರುದ್ಧ ಬಡಿದಾಡಿದ್ದು, ಕೇಸು ಜಡಿಸಿಕೊಂಡದ್ದು, ಜೀವ ಬೆದರಿಕೆ ಎದುರಿಸಿರುವುದು ಪ್ರಗತಿಪರರು. ಕರ್ನಾಟಕದಲ್ಲಿ ಬಾಬಾಬುಡಾನ್ ಗಿರಿ ಹೋರಾಟದಲ್ಲಿ ಗೌರಿ ಲಂಕೇಶ್‌ರ ಪಾತ್ರ ಸಣ್ಣದೇನೂ ಅಲ್ಲ. ಆದರೆ ಈ ಹೋರಾಟದ ಫಲವನ್ನು ಕಾಂಗ್ರೆಸ್ ಸದ್ದಿಲ್ಲದೆ ತನ್ನದಾಗಿಸಿಕೊಂಡದ್ದನ್ನೂ ನಾವು ಮರೆಯುವಂತಿಲ್ಲ. ಆದುದರಿಂದ, ಗೌರಿಯಂತಹ ಪ್ರಗತಿಪರ ಜೀವಗಳ ಕಗ್ಗೊಲೆ ನಡೆದಾಗ ಸಿದ್ದರಾಮಯ್ಯ ನೇತೃತ್ವದ ಸರಕಾರದ ಹೊಣೆಗಾರಿಕೆ ಬಹುದೊಡ್ಡದು.

ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿ, ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಮುಖ್ಯಮಂತ್ರಿ ಖುದ್ದು ಆಸಕ್ತಿಯನ್ನು ತೆಗೆದುಕೊಳ್ಳಬೇಕು. ಗೌರಿ ಹತ್ಯೆಯ ಹಿಂದೆ ಒಂದು ಸಿದ್ಧಾಂತ ಕೆಲಸ ಮಾಡಿರುವುದರಿಂದ ಮತ್ತು ಆ ಸಿದ್ಧಾಂತ ರಾಜ್ಯದ ಶಾಂತಿ ಸುವ್ಯವಸ್ಥೆಗೆ ಸವಾಲು ಒಡ್ಡುತ್ತಿರುವುದರಿಂದ ಗೌರಿ ಹತ್ಯೆಯ ತನಿಖೆ ತಾರ್ಕಿಕ ಅಂತ್ಯ ಕಾಣುವುದು ಇಡೀ ನಾಡಿನ ಅವಶ್ಯಕತೆಯಾಗಿದೆ. ಇದೇ ಸಂದರ್ಭದಲ್ಲಿ ಗೌರಿ ಹತ್ಯೆಯ ಬಗ್ಗೆ ಕೇಂದ್ರದ ನಡೆ ಅತ್ಯಂತ ನಿಗೂಢವಾಗಿರುವುದನ್ನು ನಾವು ಗಮನಿಸಬೇಕಾಗಿದೆ. ಗೌರಿಯ ಹತ್ಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿರುವ ಪ್ರಕರಣ ಆಗಿದ್ದಿದ್ದರೆ, ವಿಶ್ವಸಂಸ್ಥೆ ಆ ಹತ್ಯೆಯನ್ನು ಖಂಡಿಸುವ ಅಗತ್ಯ ಬೀಳುತ್ತಿರಲಿಲ್ಲ. ಅಮೆರಿಕದ ಪತ್ರಿಕೆ ಇದನ್ನು ಖಂಡಿಸಿ ಲೇಖನವನ್ನು ಪ್ರಕಟಿಸಬೇಕಾಗಿರಲಿಲ್ಲ. ನಮ್ಮ ನೆರೆದೇಶಗಳಲ್ಲೂ ಗೌರಿ ಹತ್ಯೆಯ ವಿರುದ್ಧ ಪ್ರತಿಭಟನೆಗಳು ನಡೆಯಬೇಕಾಗಿರಲಿಲ್ಲ.

ಅಂದರೆ ಗೌರಿಯ ಹತ್ಯೆ ರಾಷ್ಟ್ರಮಟ್ಟಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಪ್ರಕರಣ ಎನ್ನುವುದನ್ನು ಇವೆಲ್ಲ ಹೇಳುತ್ತವೆ. ವಿಶ್ವಸಂಸ್ಥೆ ಖಂಡಿಸಿದ ಪ್ರಕರಣದ ಕುರಿತಂತೆ ಒಂದು ಸಾಲಿನ ಹೇಳಿಕೆಯನ್ನು ನೀಡುವ ಹೊಣೆಗಾರಿಕೆ ನಮ್ಮ ದೇಶದ ಪ್ರಧಾನಿಗೆ ಇಲ್ಲವೇ? ವಿಶ್ವವೇ ಚರ್ಚಿಸಿದ ಒಂದು ದುರಂತದ ಬಗ್ಗೆ ದೇಶದ ಪ್ರಧಾನಿ ವೌನ ಮುರಿಯಲಿಲ್ಲ ಎನ್ನುವುದು ಏನನ್ನು ತಿಳಿಸುತ್ತದೆ? ‘ವೌನಂ ಸಮ್ಮತಿ ಲಕ್ಷಣಂ’ ಎನ್ನುವುದು ಈ ದೇಶದ ಜನಪ್ರಿಯ ಗಾದೆ. ಪ್ರಧಾನಿಯ ವೌನ ಈ ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸಿದಂತೆ ಆಗಲಿಲ್ಲವೇ? ಪತ್ರಕರ್ತೆ ,ಜನಪರ ಹೋರಾಟಗಾರ್ತಿ ಕೇವಲ ಒಂದು ರಾಜ್ಯದ ಸೊತ್ತಲ್ಲ. ಇಡೀ ದೇಶದ ಸೊತ್ತು. ಆಕೆಯನ್ನು ಕೊಲ್ಲುವುದೆಂದರೆ, ಆಕೆಯ ಸಿದ್ಧಾಂತ, ಹೋರಾಟವನ್ನು ದಮನಿಸುವುದೆಂದೇ ಅರ್ಥ. ಇದು ದೇಶಕ್ಕಾದ ನಷ್ಟ. ಈ ನಷ್ಟ ಪ್ರಧಾನಿಗೆ ಯಾಕೆ ನೋವನ್ನು ತರಲಿಲ್ಲ?

ಗೌರಿ ಲಂಕೇಶ್ ಹತ್ಯೆಯಾದ ಬೆನ್ನಿಗೇ ಆ ಸಾವನ್ನು ಕೆಲವು ಶಕ್ತಿಗಳು ಸಂಭ್ರಮಿಸಿದವು. ಮತ್ತು ಆ ಶಕ್ತಿಗಳು ಮೋದಿಯ ಪರಮ ಅಭಿಮಾನಿಗಳು ಎನ್ನುವುದು ಮೋದಿಯ ವೌನಕ್ಕೆ ಹತ್ತು ಹಲವು ಅರ್ಥಗಳನ್ನು ನೀಡುತ್ತವೆ. ಪ್ರಧಾನಿಯ ಕುರಿತಂತೆ ದೇಶದ ಅನುಮಾನವನ್ನು ವ್ಯಕ್ತಪಡಿಸುವುದಕ್ಕೆ ಇಷ್ಟು ಸಾಕಾಗುವುದಿಲ್ಲವೇ? ಪ್ರಧಾನಿ ಮೋದಿಯವರು ಬಹಿರಂಗವಾಗಿ ಒಪ್ಪಲಿ ಒಪ್ಪದಿರಲಿ, ಗಾಂಧಿಯನ್ನು ಕೊಂದ ಜನರು ಅವರಿಗೆ ಬೆಂಗಾವಲಾಗಿದ್ದಾರೆ. ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ ಎನ್ನುವುದನ್ನು ಇದೀಗ ದೇಶ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯವರು ವೌನವಹಿಸಿರುವುದು ಪ್ರಶ್ನೆಗಳನ್ನಂತೂ ಹುಟ್ಟಿಸಿ ಹಾಕುತ್ತದೆ. ಕೊಲೆ ನಡೆದಿರುವುದು ಕರ್ನಾಟಕದಲ್ಲೇ ಆಗಿದ್ದರೂ ಕೇಂದ್ರದ ಇಚ್ಛಾಶಕ್ತಿಯಿಲ್ಲದೆ, ಈ ಪ್ರಕರಣ ಇತ್ಯರ್ಥ ಕಾಣಲಾರದು. ಆದುದರಿಂದ ಈ ಹತ್ಯೆಯ ವಿರುದ್ಧ ನರೇಂದ್ರ ಮೋದಿ ತನ್ನ ನಿಲುವನ್ನು ಬಹಿರಂಗ ಪಡಿಸಬೇಕಾಗಿದೆ.

ಎಲ್ಲಿಯವರೆಗೆ ಪ್ರಧಾನಿ ಮೋದಿ ಈ ಪ್ರಕರಣದ ಕುರಿತಂತೆ ತನ್ನ ವೌನವನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೋ ಅಲ್ಲಿಯವರೆಗೆ ಅದರ ಲಾಭವನ್ನು ಹಂತಕರು ತಮ್ಮದಾಗಿಸಿಕೊಳ್ಳುತ್ತಾರೆ. ಗೌರಿಯ ಹತ್ಯೆ ವೈಯಕ್ತಿಕ ದ್ವೇಷಕ್ಕಾಗಿ ನಡೆದಿರುವುದಲ್ಲ. ಅದರ ಹಿಂದೆ ಒಂದು ಸಿದ್ಧಾಂತ ಕೆಲಸ ಮಾಡಿದೆ. ಆ ಸಿದ್ಧಾಂತವನ್ನು ಒಪ್ಪಿಕೊಂಡ ಪೊಲೀಸ್ ಅಧಿಕಾರಿಗಳೂ ನಮ್ಮ ನಡುವೆ ಇದ್ದಾರೆ. ಈ ಕಾರಣದಿಂದಲೇ ತನಿಖೆಯನ್ನು ಯಾರೂ ದಾರಿ ತಪ್ಪಿಸಬಹುದು. ಕೇಂದ್ರದ ವೌನ, ತನಿಖೆ ದಾರಿ ತಪ್ಪಲು ನೇರ ಕಾರಣವಾಗಬಹುದು. ಗೌರಿಯ ಹತ್ಯೆಯ ಹಂತಕರು ಬಂಧನವಾಗದೇ ಇದ್ದರೆ ಅದು ಇನ್ನಷ್ಟು ಪ್ರಗತಿಪರರ ಕಗ್ಗೊಲೆಗೆ ಕಾರಣವಾಗಬಹುದು. ಗೌರಿಯನ್ನು ಕೊಂದ ಸಿದ್ಧಾಂತದ ತಳಹದಿಯಿಂದ ಮೂಡಿ ಬಂದಿರುವ ಸರಕಾರ ಕೇಂದ್ರದಲ್ಲಿರುವುದರಿಂದಲೇ, ಗೌರಿಯ ಹತ್ಯೆ ಕುರಿತು ಕೇಂದ್ರ ಸರಕಾರ ಪ್ರತಿಕ್ರಿಯಿಸಬೇಕಾಗಿದೆ. ರಾಜ್ಯ ಸರಕಾರ ಹಂತಕರನ್ನು ಬಂಧಿಸಬಹುದು.

ಆದರೆ ಆ ಹಂತಕರನ್ನು ರೂಪಿಸಿರುವ ಸಿದ್ಧಾಂತದ ಹೊಣೆಯನ್ನು ಕೇಂದ್ರವೇ ಹೊರಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಗೌರಿಯ ಹತ್ಯೆಯಲ್ಲಿ ಕೇಂದ್ರದ ಪಾತ್ರವೇ ಬಹುದೊಡ್ಡದು. ಗೌರಿಯ ಹತ್ಯೆಯ ಹಂತಕರಿಗೆ ಶಿಕ್ಷೆಯಾಗದಿದ್ದರೆ ಅದು ಭಾರತದ ವರ್ಚಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ತರುತ್ತದೆ. ಕನಿಷ್ಠ ಈ ಪ್ರಜ್ಞೆಯಾದರೂ ನಮ್ಮ ಪ್ರದಾನಿಗೆ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News