ಬಸ್ ನಿಲ್ದಾಣದ ಶೌಚಾಲಯದಿಂದ ಕ್ರೀಡಾಂಗಣಕ್ಕೆ ಹರಿಯತ್ತಿರುವ ಮಲಿನ ನೀರು

Update: 2017-10-04 17:42 GMT

ಮೂಡಿಗೆರೆ, ಅ.4:ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯದ ತ್ಯಾಜ್ಯ ಸಂಗ್ರಹಣೆಗಾಗಿ ನಿರ್ಮಿಸಿರುವ ಇಂಗು ಗುಂಡಿ ಭರ್ತಿಯಾಗಿ ಅದರಿಂದ ಹೊರಡುವ ಮಲೀನ ನೀರು ಹೊಯ್ಸಳ ಕ್ರೀಡಾಂಗಣಕ್ಕೆ ಹರಿಯುತ್ತಿದೆ. ಇದರಿಂದ ಕ್ರೀಡಾಂಗಣದ ತುಂಬೆಲ್ಲಾ ದುರ್ನಾತ ಬೀರುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳುವಂತೆ ಪ.ಪಂ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಆದೇಶ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಕ್ರೀಡಾಪಟು ಮಹೇಶ್ ದೂರಿದ್ದಾರೆ. 

ಅವರು ಕಳೆದ 5 ವರ್ಷಗಳಿಂದಲೂ ಬಸ್ ನಿಲ್ದಾಣದ ಶೌಚಾಲಯದ ಇಂಗು ಗುಂಡಿ ಭರ್ತಿಯಾಗಿರುವುದರಿಂದ ಹೊರ ಹರಿಯುತ್ತಿರುವ ತ್ಯಾಜ್ಯಯುಕ್ತ ಕೊಳಚೆ ನೀರು ಪಕ್ಕದಲ್ಲಿಯೆ ಇರುವ ಹೊಯ್ಸಳ ಕ್ರೀಡಾಂಗಣಕ್ಕೆ ಹರಿಯುತ್ತಿದೆ. ಇದರಿಂದ ಕ್ರೀಡಾಂಗಣದ ತುಂಬಾ ದುರ್ನಾತ ಬೀರುತ್ತಿದ್ದು, ಈ ಬಗ್ಗೆ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಹಲವು ಬಾರಿ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. 

ಕ್ರೀಡಾಂಗಣದಲ್ಲಿ ಕೆಟ್ಟ ವಾಸನೆ ಬರುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದರಿಂದ ದಂಡ ಪ್ರಕ್ರಿಯೆ ಸಂಹಿತೆ ಕಲಂ 133 ಅನ್ವಯ ಸಾರ್ವಜನಿಕ ಉಪದ್ರವ ತಡೆಗಟ್ಟುವಂತೆ ಕೋರಿ 6 ಮಂದಿ ಕ್ರೀಡಾಪಟುಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.  

ಇದನ್ನು ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳು, ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯದಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆಗಾಗಿ ನಿರ್ಮಿಸಲಾಗಿರುವ ಇಂಗು ಗುಂಡಿ ತುಂಬಿದಾಗ ಪಪಂ ಸೆಕ್ಕಿಂಗ್ ಯಂತ್ರದ ಮೂಲಕ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳುವುದು. ಈ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಕೆಎಸ್‍ಆರ್‍ಟಿಸಿ ಸಂಸ್ಥೆ ವತಿಯಿಂದ ಬರಿಸತಕ್ಕದ್ದು. ಈ ಕಾರ್ಯವನ್ನು ಪರ್ಯಾಯ ವ್ಯವಸ್ಥೆ ತನಕ ನಿರಂತರವಾಗಿ ನಿರ್ವಹಿಸಲು ಹಾಗೂ ಹೊಯ್ಸಳ ಕ್ರೀಡಾಂಗಣಕ್ಕೆ ಹರಿಯಲು ಬಿಟ್ಟಿರುವ ಮಲೀನಯುಕ್ತ ನೀರನ್ನು ನಿಲ್ಲಿಸುವಂತೆ ಜೂ.29ರಂದು ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ. 

ಈ ಆದೇಶವನ್ನು ಕಡೆಗಣಿಸಿರುವ ಅಧಿಕಾರಿಗಳು ಕ್ರೀಡಾಂಗಣದ ಬದಿಯಲ್ಲಿ ತೆರೆದ ಚರಂಡಿಯೊಂದನ್ನು ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ. ಕೂಡಲೇ ಕೆಎಸ್‍ಆರ್‍ಟಿಸಿ ಸಂಸ್ಥೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶವನ್ನು ಪಾಲಿಸುವ ಮೂಲಕ ಕ್ರೀಡಾಂಗಣವನ್ನು ವಾಸನೆಯಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News