ರಥಯಾತ್ರೆ ಮೂಲಕ ತೀರ್ಥ ವಿತರಣೆ ಬೇಡ : ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಆಗ್ರಹ

Update: 2017-10-04 17:59 GMT

ಮಡಿಕೇರಿ, ಅ.4 :ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾದ ನಂತರ ವಿವಿಧ ಸಂಘ ಸಂಸ್ಥೆಗಳು ರಥಯಾತ್ರೆಯ ಮೂಲಕ ತೀರ್ಥ ವಿತರಿಸುವುದು ಕಾವೇರಿ ತುಲಾಸಂಕ್ರಮಣದ ಧಾರ್ಮಿಕ ಆಚಾರ, ವಿಚಾರಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದೆ. 

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಉಳ್ಳಿಯಡ ಪೂವಯ್ಯ, ತಲಕಾವೇರಿಯಲ್ಲಿ ತೀರ್ಥೋದ್ಭವವಾದ ನಂತರ ಬಿಂದಿಗೆಗಳಲ್ಲಿ ತೀರ್ಥವನ್ನು ಕೊಂಡೊಯ್ದು ಡ್ರಮ್ಮುಗಳಲ್ಲಿ ಶೇಖರಿಸಿಟ್ಟು ಊರೂರುಗಳಲ್ಲಿ ಹಂಚಲಾಗುತ್ತಿದೆ. ಇದು ಕಾವೇರಿ ತುಲಾ ಸಂಕ್ರಮಣದ ಆಚಾರ ವಿಚಾರಗಳಿಗೆ ವಿರುದ್ಧವಾಗಿದ್ದು, ತೀರ್ಥರೂಪಿಣಿ ಕಾವೇರಿಯನ್ನು ಕಣ್ತುಂಬಿಕೊಳ್ಳುವ ಭಕ್ತರ ಉತ್ಸಾಹವನ್ನು ಕಸಿದುಕೊಂಡಂತ್ತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಬೇಕೆ ಹೊರತು ಕಡಿಮೆಯಾಗಬಾರದು. ರಥಯಾತ್ರೆಯ ಮೂಲಕ ತಾವಿದ್ದಲ್ಲಿಗೆ ತೀರ್ಥ ಬರುತ್ತದೆ ಎಂದಾದರೆ ಪುಣ್ಯಕ್ಷೇತ್ರ ತಲಕಾವೇರಿಗೆ ತೆರಳಿ ತೀರ್ಥ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪೂವಯ್ಯ ಅಭಿಪ್ರಾಯಪಟ್ಟರು. ವಿವಿಧ ಸಂಘ ಸಂಸ್ಥೆಗಳು ತೀರ್ಥ ವಿತರಣೆಗಾಗಿ ತೀರ್ಥವನ್ನು ಸಂಗ್ರಹಿಸಲು ತೀರ್ಥೋದ್ಭವದ ಸಂದರ್ಭ ಮುಗಿ ಬೀಳುವುದರಿಂದ ನೈಜ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದರು.

ಸಂಘ ಸಂಸ್ಥೆಗಳು ಉತ್ತಮ ಉದ್ದೇಶದಿಂದಲೆ ತೀರ್ಥವನ್ನು ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆಯಾದರು, ಇದು ಕಾವೇರಿ ತುಲಾ ಸಂಕ್ರಮಣದ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ ಎಂದರು. ತೀರ್ಥೋದ್ಭವದ ಸಂದರ್ಭ ಕುಂಡಿಕೆಗೆ ರಾಸಾಯನಿಕ ಮಿಶ್ರಿತ ಕುಂಕುಮ ಮತ್ತು ಹೂವುಗಳನ್ನು ಹೆಚ್ಚಾಗಿ ಹಾಕುತ್ತಿರುವುದರಿಂದ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವೂ ತಪ್ಪಿಹೋಗುತ್ತದೆ. ಅಲ್ಲದೆ, ಪವಿತ್ರ ತೀರ್ಥದ ನೈಜ ಗುಣ ಮರೆಯಾಗಿ ವರ್ಷಪÀÇರ್ತಿ ತೀರ್ಥದ ನೈಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಪೂವಯ್ಯ ಬೇಸರ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳಿಂದ ದೇವಾಲಯ ವ್ಯವಸ್ಥಾಪನಾ ಸಮಿತಿಯನ್ನು ರಚಿಸದಿರುವುದೆ ಭಾಗಮಂಡಲ ಮತ್ತು ತಲಕಾವೇರಿಯ ಅವ್ಯವಸ್ಥೆಗಳಿಗೆ ಮೂಲ ಕಾರಣವೆಂದು ಅವರು ಆರೋಪಿಸಿದರು.

 ವೇದಿಕೆಯ ಸಂಚಾಲಕರಾದ ಕೊಕ್ಕಲೆರ ಎ.ಕಾರ್ಯಪ್ಪ ಮಾತನಾಡಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲವನ್ನು ಸುಮಾರು 15 ಕೊಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆಯಾದರು ಇಲ್ಲಿಯವರೆಗೆ ಮುಖ್ಯ ದ್ವಾರವನ್ನು ಅಳವಡಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆಗಳು
 ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಪವಿತ್ರ ಸ್ನಾನ ಮಾಡುವುದರಿಂದ ಅಲ್ಲಿ ನದಿಯ ನೀರಿನ ಮಟ್ಟವನ್ನು ನಾಲ್ಕು ಅಡಿಗಳಿಗೆ ಸೀಮಿತವಾಗಿರುವಂತೆ ವ್ಯವಸ್ಥೆ ಮಾಡಬೇಕು, ಕೇಶಮುಂಡನ ಮಾಡಿಸಿಕೊಂಡ ಭಕ್ತರು ‘ಪಿಂಡ ಪ್ರದಾನ’ ಮಾಡಲು ಪಿಂಡ ಸಾಮಾಗ್ರಿಗಳಿಗೆ ಬಹಳಷ್ಟು ದೂರ ನಡೆಯಬೇಕಾಗಿದೆ. ಪ್ರಯಾಸದಲ್ಲಿ ದೂರ ಕ್ರಮಿಸುವ ಬದಲು ಅವನ್ನು ಸಮೀಪದಲ್ಲಿಯೇ ಮಾರಾಟಕ್ಕೆ ಇಡುವಂತೆ ವ್ಯವಸ್ಥೆ ಮಾಡುವುದು, ಪಿಂಡ ಸಾಮಗ್ರಿಗಳನ್ನು ತುದಿ ಬಾಳೆ ಎಲೆಯಲ್ಲಿ ಇರಿಸುವುದು ಸಂಪ್ರದಾಯ. ಮಾರಾಟಗಾರರು ನೀಡುವ ಈ ತುದಿ ಬಾಳೆ ಎಲೆ ಗಾತ್ರದಲ್ಲಿ ತೀರಾ ಚಿಕ್ಕದಾಗಿದ್ದು, ಪಿಂಡ ಕ್ರಿಯೆ ನಡೆಸುವಾಗ, ಇದರೊಂದಿಗೆ ನೆಲದ ಮಣ್ಣು, ಮರಳು ಸೇರಿಕೊಂಡು ಪಿಂಡಪರದಾನ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ.

ಈ ವಿಷಯದಲ್ಲಿ ಸಂಬಂಧಿಸಿದ ಗುತ್ತಿಗೆದಾರರು- ಮಾರಟಗಾರರಿಗೆ ಸೂಕ್ತ ಮುನ್ಸೂಚನೆ ನೀಡಬೇಕು, ಪಿಂಡ ಸಾಮಗ್ರಿಗಳ ದರ ಫಲಕವನ್ನು ಭಕ್ತಾಧಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ಅಳವಡಿಸಬೇಕು, ತ್ರಿವೇಣಿ ಸಂಗಮದಲ್ಲಿ ಮಹಿಳೆಯರು ಸೇರಿದಂತೆ ಭಕ್ತಾಧಿಗಳು ಸ್ನಾನ ಮಾಡುವ ಸಂದರ್ಭ ಕಿಡಿಗೇಡಿಗಳಿಂದ ಮುಜುಗರ ಎದುರಾಗದಂತೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸುವುದು ಅಥವಾ ಫೋಟೋ ತೆಗೆಯುವುದನ್ನು ನಿಷೇಧಿಸಬೇಕು, ಸಾರ್ವಜನಿಕ ಶೌಚಾಲಯದ ನಿರ್ವಹಣೆ, ಮೇಲುಸ್ತುವಾರಿಗೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆ ಗೊತ್ತಿಲ್ಲದ ವ್ಯಕ್ತಿಗಳನ್ನು ನೇಮಿಸುವುದರಿಂದ ಭಕ್ತಾದಿಗಳಿಗೆ ಮುಜುಗರವಾಗುತ್ತಿದೆ. ಭಕ್ತಾಧಿಗಳಿಂದ ಶೌಚಾಲಯ ಬಳಕೆಗೆ ಹೆಚ್ಚಿನ ಹಣವನ್ನು ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಶೌಚಾಲಯದಲ್ಲಿ ಸಮರ್ಪಕ ನೀರಿನ ಸೌಲಭ್ಯ ಇಲ್ಲದೇ ತೊಂದರೆ ಆಗುವುದ್ನು ತಪ್ಪಿಸಲು, ಸಮರ್ಪಕ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ “ದೂರುಪೆಟ್ಟಿಗೆ”ಯನ್ನು ಇಡಬೇಕು, ತಲಕಾವೇರಿ ಸ್ನಾನ ಕೊಳದ ನೀರಿನ ಮಟ್ಟವನ್ನು ಮೂರುವರೆ ಅಡಿಗಳಿಗೆ ಸೀಮಿತಗೊಳಿಸಿ ಹಳೆಯ ನೀರನ್ನು ಶುದ್ಧೀಕರಿಸುವುದು, ತಲಕಾವೇರಿಯಲ್ಲಿಯೂ ಸಮೃದ್ಧಿಯಾಗಿ ನೀರಿನ ಸೌಕರ್ಯಕ್ಕೆ ಸಮರ್ಪಕ ವ್ಯವಸ್ಥೆ ಮಾಡಬೇಕು, ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭ ಸ್ಥಳೀಯ ಭಕ್ತಾಧಿಗಳ ಭಜನೆ, ನಾಮ ಸಂಕೀರ್ತನೆ ಇತ್ಯಾದಿ ಭಕ್ತಿಯ ಚಟುವಟಿಕೆಗಳಿಗೆ ತಡೆಯೊಡ್ಡಬಾರದು, ಪವಿತ್ರ ತೀರ್ಥೋದ್ಭವದ ಸಂದರ್ಭ ಪುಣ್ಯ ಕುಂಡಿಕೆಯ ಸುತ್ತ ರಾಜಕಾರಣಿಗಳು, ಅಧಿಕಾರ ವರ್ಗದವರು ಸಂಸಾರ ಸಮೇತರಾಗಿ ನಿಂತು ನೂಕನುಗ್ಗಲಿಗೆ ಅವಕಾಶ ಮಾಡುವುದನ್ನು ತಪ್ಪಿಸಬೇಕು, ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದ್ದು, ಪಾವಿತ್ರ್ಯತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಕಾವೇರಿ ಜಾತ್ರೆಯ ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗುವ ಪೊಲೀಸರಾದಿಯಾಗಿ ಎಲ್ಲಾ ರಕ್ಷಣಾ ಸಿಬ್ಬಂದಿಗಳು ಭಕ್ತಾಧಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆಯನ್ನು ನೀಡಬೇಕೆಂದು ಉಳ್ಳಿಯಡ ಪೂವಯ್ಯ ಒತ್ತಾಯಿಸಿದ್ದಾರೆ. 

 ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾನೂನು ಸಲಹೆಗಾರರಾದ ರತನ್ ತಮ್ಮಯ್ಯ, ಪ್ರಮುಖರಾದ ಕೆ.ಕೆ. ಮುತ್ತಣ್ಣ, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜ್ಜಿರ ಅಯ್ಯಪ್ಪ ಹಾಗೂ ತಿರಿ ಬೊಳ್ಚ ಕೊಡವ ಸಂಘದ ಅಧ್ಯಕ್ಷರಾದ ಉಳ್ಳಿಯಡ ಡಾಟಿ ಪೂವಯ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News