ಅ.7 ರಂದು ಉಲಮಾ ಉಮರಾ ಸಮ್ಮೇಳನ

Update: 2017-10-04 18:01 GMT

ಮಡಿಕೇರಿ, ಅ.4 : ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾ ಸಂಘಟನೆಯ ವತಿಯಿಂದ ಅ.7 ರಂದು ನೆಲ್ಯಹುದಿಕೇರಿಯ ದಾರುಸ್ಸಲಾಂ ಆವರಣದಲ್ಲಿ ಉಲಮಾ ಉಮರಾ ಸಮ್ಮೇಳನ ನಡೆಯಲಿದೆ. 

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಲಮಾದ ಜಿಲ್ಲಾ ಘಟಕದ ಸದಸ್ಯ ಎಂ.ವೈ.ಅಶ್ರಫ್ ಫೈಝಿ, ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಸಮುದಾಯದ ನೇತೃತ್ವವನ್ನು ವಹಿಸಿರುವ ಧಾರ್ಮಿಕ ವಿದ್ವಾಂಸರುಗಳನ್ನು ಒಗ್ಗೂಡಿಸಿ ಕರ್ತವ್ಯಗಳ ಕುರಿತು ಅರಿವು ಮೂಡಿಸುವುದು, ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಲು ಉಲಮಾಗಳನ್ನು ಸಕ್ರಿಯ ಗೊಳಿಸುವ ಉದ್ದೇಶದಿಂದ ಸಮ್ಮೆಳನವನ್ನು ನಡೆಸಲಾಗುತ್ತಿದೆ ಎಂದರು.

 ಧಾರ್ಮಿಕ ವಿದ್ವಾಂಸರು ನಿಸ್ವಾರ್ಥತೆಯಿಂದ ಕರ್ತವ್ಯವನ್ನು ನಿಭಾಯಿಸುವುದರಿಂದ ಮಾತ್ರ ಸಮಾಜವನ್ನು ಧರ್ಮಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅಶ್ರಫ್ ಫೈಝಿ, ಉಲಮಾಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

 ಶ್ರೇಷ್ಠ ಪಂಡಿತರನ್ನು ಒಳಗೊಂಡ ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾದ ಅಧೀನದಲ್ಲಿ ಅನೇಕ ಮದ್ರಸಗಳು ಅರೇಬಿಕ್ ಕಾಲೇಜು, ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಆಶ್ರಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇಸ್ಲಾಂ ಧರ್ಮದ ಆದರ್ಶದಂತೆ ಮಹಲ್ ಜಮಾಅತ್‍ಗಳನ್ನು ಒಂದು ಗೂಡಿಸುವುದು, ಧಾರ್ಮಿಕ ವಿಧಿ ವಿಧಾನಗಳನ್ನು ಸಂರಕ್ಷಿಸುವುದು, ಸಮಾಜದ, ಸಮುದಾಯದ ಹಾಗೂ ರಾಷ್ಟ್ರದ ಕ್ಷೇಮಕ್ಕಾಗಿ ಧಾರ್ಮಿಕ ಸೌಹಾರ್ದತೆಯನ್ನು ಭದ್ರಗೊಳಿಸುವುದು, ಸಮುದಾಯದ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತಂದು ಜಾತ್ಯತೀತತೆಯ ಬಗ್ಗೆ ಮನವರಿಕೆ ಮಾಡಿಕೊಡುವುದು ಸಂಘಟನೆಯ ಗುರಿಯಾಗಿದೆ ಎಂದರು.

 ಮುಸಲ್ಮಾನರ ಧಾರ್ಮಿಕ ಹಾಗೂ ಶೈಕ್ಷಣಿಕ ರಂಗದ ಸಮಗ್ರ ಏಳಿಗೆಯನ್ನು ಮುಂದಿಟ್ಟುಕೊಂಡು ಜಮಾಯತ್ ಉಲಮಾ ವತಿಯಿಂದ ಅ.7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಲಮಾ ಉಮರಾ ಸಮ್ಮೇಳನ ನಡೆಯಲಿದೆ. ಸಮಾರಂಭದಲ್ಲಿ ಕೊಡಗು ಜಿಲ್ಲಾ ಸಮಸ್ತ ಸಹಾಯಕ ಖಾಝಿಗಳಾದ ಎಂ.ಎಂ. ಅಬ್ದುಲ್ಲಾ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ವಾಗ್ಮಿ ಅಲವಿ ಧಾರಿಮಿ ಕುಯಿಮಣ್ಣ ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್, ಎಸ್‍ವೈಎಸ್ ಜಿಲ್ಲಾಧ್ಯಕ್ಷರಾದ ವಿ.ಪಿ.ಎಸ್. ತಂಙಳ್ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಪ್ರಯುಕ್ತ ಅಂದು ಮದರಸಗಳಿಗೆ ರಜೆ ಘೋಷಿಸಲಾಗಿದೆಯೆಂದು ಎಂ.ವೈ. ಅಶ್ರಫ್ ಫೈಝಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಎಂ.ಎಂ.ಅಬ್ದುಲ್ ಫೈಝಿ, ಸದಸ್ಯರುಗಳಾದ ವೈ.ಎಂ. ಉಮ್ಮರ್ ಫೈಝಿ, ಉಸ್ಮಾನ್ ಫೈಝಿ ಹಾಗೂ ಮೊಯ್ದು ಫೈಝಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News