×
Ad

'ಅಮೃತ್' ಯೋಜನೆಯಡಿ 62.45 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದ ರಾಜಕಾಲುವೆ ಅಭಿವೃದ್ದಿ

Update: 2017-10-04 23:51 IST

ಶಿವಮೊಗ್ಗ, ಅ. 4: ಅವ್ಯವಸ್ಥಿತ ಚರಂಡಿ ಹಾಗೂ ರಾಜಕಾಲುವೆಗಳಿಂದ ಧಾರಾಕಾರ ಮಳೆಯಾದ ವೇಳೆ ತಗ್ಗು ಪ್ರದೇಶಗಳು ಜಲಾವೃತವಾಗಿ ನಾಗರೀಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ 'ಅಮೃತ್' ಯೋಜನೆಯಡಿ, ಶಾಶ್ವತ ಪರಿಹಾರ ಕಲ್ಪಿಸಲು ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ. ಅವ್ಯವಸ್ಥಿತ ಚರಂಡಿ, ರಾಜಕಾಲುವೆಗಳ ಮರು ದುರಸ್ತಿಗೆ ಮುಂದಾಗುವುದರ ಜೊತೆಗೆ, ಅಗತ್ಯವಿರುವೆಡೆ ಹೊಸ ರಾಜಕಾಲುವೆಗಳ ನಿರ್ಮಾಣಕ್ಕೆ ಕ್ರಮಕೈಗೊಂಡಿದೆ. 

ಇದನ್ನ ಮಹಾನಗರ ಪಾಲಿಕೆ ಆಯುಕ್ತ ಎಂ.ಪಿ. ಮುಲ್ಲೈ ಮುಹಿಲನ್‍ರವರು ಖಚಿತಪಡಿಸಿದ್ದಾರೆ. 'ಅಮೃತ್ ಯೋಜನೆಯಡಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 62.45 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಮರು ನಿರ್ಮಾಣ ಹಾಗೂ ಅಗತ್ಯವಿರುವೆಡೆ ಹೊಸ ರಾಜಕಾಲುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಮೂರು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತಂತೆ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. 'ಸ್ಲಿಪ್ - 1 ನೇ ಹಂತದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 10 ಕಿ.ಮೀ. ಉದ್ದ ಮುಖ್ಯ ಕಾಲುವೆಗಳ ಮರು ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಆಹ್ವಾನಿಸಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಅನುಷ್ಠಾನಕ್ಕೆ ಕಾರ್ಯಾದೇಶ ನೀಡಲಾಗುವುದು' ಎಂದು ಮಾಹಿತಿ ನೀಡಿದ್ದಾರೆ. 

ಉಳಿದಂತೆ 'ಸ್ಲಿಪ್ -2' ಹಾಗೂ 'ಸ್ಲಿಪ್ - 3' ನೇ ಹಂತದಲ್ಲಿ ಒಟ್ಟಾರೆ 57.45 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸದರಿ ಯೋಜನೆಯ ಕಾರ್ಯಗತಕ್ಕೆ ಈಗಾಗಲೇ ಎಸ್.ಹೆಚ್.ಪಿ.ಎಸ್.ಸಿ. ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆದಷ್ಟು ಶೀಘ್ರವಾಗಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ವಿವರ: ಪ್ರಸ್ತುತ ಪ್ರಥಮ ಹಂತದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲಾಗುತ್ತಿರುವ 10 ಕಿ.ಮೀ. ಉದ್ದದ ಮುಖ್ಯ ಕಾಲುವೆಗಳ ವಿವರ ಈ ಮುಂದಿನಂತಿದೆ. ವಾರ್ಡ್ 34 ರ ಗಣಪತಿ ಲೇಔಟ್‍ನಿಂದ ತುಂಗಾನದಿಯವರೆಗಿನ ಕಾಲುವೆ (ಮೊತ್ತ : 75 ಲಕ್ಷ ರೂ.), ವಾರ್ಡ್ ನಂಬರ್ 20 ರ ಬಸ್ ನಿಲ್ದಾಣದಿಂದ ನೆಹರೂ ರಸ್ತೆ ಗಾರ್ಡನ್ ಏರಿಯಾ ಮೂಲಕ ಹಾದು ಹೋಗುವ ಕಾಲುವೆ (ಮೊತ್ತ : 94 ಲ.ರೂ.), ವಾರ್ಡ್ ನಂಬರ್ 8, 18 ಹಾಗೂ 19 ರಲ್ಲಿ ಹಾದು ಹೋಗುವ ಹೊಸಮನೆಯ ವಿಠ್ಠಲ ದೇವಾಲಯದಿಂದ ಗಾಂಧಿನಗರ ಮಾರ್ಗವಾಗಿ ಸವಳಂಗ ರಸ್ತೆ ತಲುಪಲಿರುವ ಕಾಲುವೆ (ಮೊತ್ತ : 186 ಲ.ರೂ.), 
ಕಾಶೀಪುರ ಮುಖ್ಯ ರಸ್ತೆಯಿಂದ ತಮಿಳು ಕಾಲೋನಿ ಮುಖ್ಯ ರಸ್ತೆಯವರೆಗಿನ ಕಾಲುವೆ (ಮೊತ್ತ : 132 ಲ.ರೂ.) ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಯುಜಿಡಿ ಸಂಪರ್ಕ ಮತ್ತೀತರ ಇತರೆ ಕೆಲಸ ಕಾರ್ಯಗಳಿಗೆ 12.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. 'ಸ್ಲಿಪ್ - 2' ಮತ್ತು 'ಸ್ಲಿಪ್ - 3' ರಲ್ಲಿ 57.45 ಕೋಟಿ ರೂ. ವೆಚ್ಚದಲ್ಲಿ 39 ಕಾಲುವೆಗಳ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುತ್ತಿದೆ.

ಸಮಸ್ಯೆ ಪರಿಹಾರ: ಅಮೃತ್ ಯೋಜನೆಯ ಕಾಮಗಾರಿ ಪೂರ್ಣಗತಿಯಲ್ಲಿ ಅನುಷ್ಠಾನಗೊಂಡರೆ ತಗ್ಗು ಪ್ರದೇಶಗಳ ಬಡಾವಣೆ, ರಸ್ತೆಗಳು ಜಲಾವೃತವಾಗುವುದು ತಪ್ಪಲಿದೆ. ರಾಜಕಾಲುವೆ, ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲಿದೆ ಎಂದು ಎಂ.ಪಿ.ಮುಲ್ಲೈಮಹಿಲನ್‍ರವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News