ಗೋವಾದ ಕನ್ನಡಿಗರಿಗೆ ಶಾಶ್ವತ ಪರಿಹಾರ ಸಿಗಲಿ

Update: 2017-10-04 18:36 GMT

ಮಾನ್ಯರೆ,

ಗೋವಾ ಸರಕಾರ ತನ್ನ ರಾಜ್ಯ ಕರ್ನಾಟಕದ ಪ್ರಯಾಣಿಕರ ಕೊಡುಗೆಯಿಂದಲೂ ಸಂಪದ್ಭ್ಬರಿತವಾಗಿದೆ ಎನ್ನುವುದನ್ನು ಮರೆತು ಪದೇ ಪದೇ ಅಹಂಕಾರದಿಂದಲೇ ವರ್ತಿಸುತ್ತಿದೆ. ವಿಶೇಷವಾಗಿ ಮುಖ್ಯಮಂತ್ರಿಯಾಗಿರುವ ಮನೋಹರ್ ಪಾರಿಕ್ಕರ್ ಕರ್ನಾಟಕದ ಬಗ್ಗೆ ತುಂಬಾ ಕೆಳಮಟ್ಟದ ಭಾವನೆಗಳಿಂದ ನಡೆದುಕೊಂಡು ದುರಹಂಕಾರದ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿದ್ದಾರೆ.
ಮಹಾದಾಯಿ ವಿಚಾರದಲ್ಲೂ ಕರ್ನಾಟಕದ ಪ್ರಮುಖರ ಜೊತೆ ಮಾತನಾಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ. ಈಗ ಬೀಚ್‌ನಲ್ಲಿ ಹಲವಾರು ದಶಕಗಳಿಂದ ನೆಲೆಸಿರುವ, ಶ್ರಮಪಟ್ಟು ಬದುಕುತ್ತಿರುವ ನೂರಾರು ಕನ್ನಡ ಕುಟುಂಬಗಳನ್ನು ಎತ್ತಂಗಡಿ ಮಾಡಿಸಿ ಅವರು ವಾಸಿಸುತ್ತಿದ್ದ ಮನೆಗಳನ್ನು ನಗರ ಸೌಂದರ್ಯದ ಹೆಸರಲ್ಲಿ ಧ್ವಂಸಗೊಳಿಸಿ ಬೀದಿ ಪಾಲು ಮಾಡಿರುವುದು ಖಂಡನೀಯ.
ಗೋವಾದ ಅನೇಕ ನಾಗರಿಕರು ಕರ್ನಾಟಕದಲ್ಲೂ ಇದ್ದಾರೆ. ಅವರನ್ನು ಕನ್ನಡಿಗರು ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಆದರೆ ಗೋವಾ ಸರಕಾರ ಕನ್ನಡಿಗರ ಬಗ್ಗೆ ತಿರಸ್ಕಾರ ಹೊಂದಿದೆ. ಅಲ್ಲಿನ ಸರಕಾರ ಕನ್ನಡಿಗರಿಗೆ ಪದೇ ಪದೇ ಕಿರುಕುಳ ನೀಡುತ್ತಿದೆ. ಅವರನ್ನು ಅತಂತ್ರರನ್ನಾಗಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರಕಾರ ಗಂಭೀರವಾಗಿ ಯೋಚಿಸಿ, ಕೇಂದ್ರ ಸರಕಾರದ ನೆರವು ಪಡೆದು ಅಲ್ಲಿರುವ ಕನ್ನಡಿಗರಿಗೆ ಶಾಶ್ವತವಾಗಿ ವಾಸ್ತವ್ಯಕ್ಕೆ ಮನೆಗಳನ್ನು ಒದಗಿಸಿಕೊಡಲು ಯೋಜನೆರೂಪಿಸಿ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಇಂತಹ ಕ್ರಮಗಳಿಂದ ಮಾತ್ರ ಗೋವಾದಲ್ಲಿರುವ ಅತಂತ್ರ ಕನ್ನಡಿಗರಿಗೆ ಶಾಶ್ವತವಾದ ಪರಿಹಾರ ದೊರೆಯುತ್ತದೆ ಹೊರತು ನಾವು ಇಲ್ಲಿ ಮಾಡುವ ಕೂಗಾಟ, ರಂಪಾಟದಿಂದ ಏನೂ ಉಪಯೋಗವಾಗದು.

Similar News