ಅ.7 ರಂದು ಜಿ.ಕೆ.ವೀರೇಶ್ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು, ಅ.5: ಸಮಗ್ರಕೃಷಿಯಲ್ಲಿ ಸಾಧನೆ ಮಾಡಿದ ನಾಲ್ಕು ಜನ ಶ್ರೇಷ್ಠ ರೈತರಿಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ.ಜಿ.ಕೆ.ವೀರೇಶ್ ದತ್ತಿನಿಧಿ ಅಂಗವಾಗಿ ‘ಶ್ರೇಷ್ಠ ಸಮಗ್ರ ಕೃಷಿಕ ಪ್ರಶಸ್ತಿ ’ ಪ್ರದಾನ ಸಮಾರಂಭವನ್ನು ಅ.7 ರಂದು ವಿವಿ ಆವರಣದಲ್ಲಿ ಸಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಡಾ.ಬಿ.ಕೃಷ್ಣಮೂರ್ತಿ, ಇತ್ತೀಚಿನ ವರ್ಷಗಳಲ್ಲಿ ಕೃಷಿ ದೊಡ್ಡ ಸವಾಲಾಗಿ ಅನೇಕ ರೈತರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ, ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿಕರು ಬಿಕ್ಕಟ್ಟಿಗೆ ಸಿಲುಕಿ ಹಾಕಿಕೊಂಡು, ಕೃಷಿ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ, ಕೃಷಿಕರನ್ನು ರಕ್ಷಿಸುವ ಹಾಗೂ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲುಮ್ನಿ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷರು 2016 ರಲ್ಲಿ 15 ಲಕ್ಷ ದತ್ತಿ ನಿಧಿಯಿಟ್ಟು, ಅದರ ಮೂಲಕ ಬರುವ ಬಡ್ಡಿ ಹಣದಲ್ಲಿ ರಾಜ್ಯದ ನಾಲ್ಕು ಶ್ರೇಷ್ಟ ರೈತರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದರ ಭಾಗವಾಗಿ ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಚ್.ಸದಾನಂದ, ರಾಯಚೂರು ಜಿಲ್ಲೆಯ ರಾಮಕೃಷ್ಣ, ಶಿವಮೊಗ್ಗದ ದುರ್ಗಪ್ಪ ಹಾಗೂ ಉಡುಪಿ ಜಿಲ್ಲೆಯ ಶಬರೀಶ್ ಸುವರ್ಣಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪ್ರಶಸ್ತಿಯನ್ನು ರೇಷ್ಮೆ ಸಚಿವ ಎ.ಮಂಜು ಪ್ರದಾನ ಮಾಡಲಿದ್ದು, ಸಂಸದ ಮೋಹನ್, ಸಂಸದರಾದ ಎಸ್.ಪಿ.ಹನುಮೇಗೌಡ, ಆರ್.ಧ್ರುವ ನಾರಾಯಣ, ಮಲೆನಾಡು ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಪಿ. ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.