230 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆ
ಬೆಂಗಳೂರು, ಅ.5: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ 230 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ವೈದ್ಯಕೀಯ ಕಾಲೇಜಿಗೆ ಅಕ್ಟೋಬರ್ ಅಂತ್ಯದ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹಜ್ ಖಾತೆ ಸಚಿವ ಆರ್.ರೋಷನ್‌ಬೇಗ್ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ಪುಲುಕೇಶಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಯಶಸ್ವನಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರಕಾರ ತಯಾರಿದೆ. ಈ ನಿಟ್ಟಿನಲ್ಲಿ ಯೂನಿವರ್ಸಲ್ ಹೆಲ್ತ್‌ಕಾರ್ಡ್ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇದೀಗ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕಾಲೇಜುಗಳ ಜೊತೆಗೆ ಬೋರಿಂಗ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ವೈದ್ಯಕೀಯ ಕಾಲೇಜು ಸೇರ್ಪಡೆಯಾಗಲಿದೆ. ಇದರಿಂದ ನೂರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಸರಕಾರದ ಸಾಧನೆಗಳನ್ನು ಜನರ ಮನೆ ಮನೆ ತಲುಪಿಸಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು, ಅಧಿಕಾರ ನಡೆಸಲಿದೆ ಎಂದು ಸಚಿವ ಬೇಗ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಅಭಿವೃದ್ಧಿಗಾಗಿ ಸರಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಬಿಎಂಪಿಗೆ 7 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಮಾಜಿ ಶಾಸಕ ಪ್ರಸನ್ನ ಕುಮಾರ್ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಬಡವರಿಗೆ ಯಶಸ್ವಿನಿ ಕಾರ್ಡ್ ಸಹಕಾರಿಯಾಗಲಿದ್ದು, ನಗರದ 70 ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಆರೋಗ್ಯ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯ ಝಾಕೀರ್, ಕಾಂಗ್ರೆಸ್ ಮುಖಂಡರಾದ ವಿ.ಏಳುಮಲೈ, ವರುಣ್ ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.