ತಾಂತ್ರಿಕ ಟೆಂಡರ್ ಮುಗಿದ ಕೂಡಲೇ ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು: ಸಿದ್ದಗಂಗಪ್ಪ
ಹನೂರು, ಅ.7: ಕೊಳ್ಳೇಗಾಲ- ಹನೂರು ಭಾಗದ 24 ಕಿ.ಮೀ ರಸ್ತೆಯನ್ನು ಕೆ-ಶಿಪ್ ಯೋಜನೆಯಡಿ 80 ಅಡಿ ರಸ್ತೆ ನಿರ್ಮಾಣ ಮಾಡಲು ಹಣಕಾಸು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ತಾಂತ್ರಿಕ ಟೆಂಡರ್ ಮುಕ್ತಾಯವಾದ ಕೂಡಲೇ ಮುಂದಿನ 2 ತಿಂಗಳೊಳಗಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ ಸಿದ್ದಗಂಗಪ್ಪ ಭರವಸೆ ನೀಡಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿ, ವಡಕೆಹಳ್ಳ - ರಾಮಾಪುರ - ದಿನ್ನಳ್ಳಿ ರಸ್ತೆಗಳನ್ನು ಪರಿಶೀಲನೆ ನಡೆಸಿ ಬಳಿಕ ಹನೂರು ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರ ಬಹು ದಿನದ ಒತ್ತಾಯದ ಮೇರೆಗೆ ಮತ್ತು ಸಚಿವ ಮಹದೇವಪ್ಪ ಅವರ ಸೂಚನೆ ಮೇರೆಗೆ ಹನೂರು ಕ್ಷೇತ್ರದಲ್ಲ್ಲಿ ಪರಿಶೀಲನೆಗಾಗಿ ಆಗಮಿಸಿದ್ದೇವೆ. ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದವತಿಯಿಂದ ಕೈಗೆತ್ತಿಕೊಂಡಿರುವ 500 ಕೊಠಡಿಗಳ ವಸತಿ ಸಮುಚ್ಛಯ, ಡಾರ್ಮಿಟರಿ ಕಟ್ಟಡ, ರಂಗಮಂದಿರದ ಮುಂಭಾಗದ ಪ್ರದೇಶಕ್ಕೆ ಶೆಲ್ಟರ್ ಅಳವಡಿಸುವ ಕಾಮಗಾರಿ ಸೇರಿದಂತೆ ಬಹುತೇಕ ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು, ರಂಗಂದಿರ ಪ್ರದೇಶದ ಕಾಮಗಾರಿ ದೀಪಾವಳಿ ಜಾತ್ರಾ ಮಹೋತ್ಸವದ ವೇಳೆಗೆ ಮುಗಿಲಿದೆ. ಇನ್ನು ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೊಳ್ಳೇಗಾಲ-ಹನೂರು ರಸ್ತೆ ಕಾಮಗಾಮರಿ 2 ತಿಂಗಳಲ್ಲಿ ಪ್ರಾರಂಭ: ಕೊಳ್ಳೇಗಾಲ-ಹನೂರು ಭಾಗದ ರಸ್ತೆಯನ್ನು 80 ಅಡಿ ರಸ್ತೆಯಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಈ ಕಾಮಗಾರಿ ಸೇರಿದಂತೆ ರಾಜ್ಯದ ವಿವಿಧೆಡೆ ರಸ್ತೆಗಳನ್ನು ಕೆ-ಶಿಪ್ ಯೋಜನೆಯಡಿ 5.200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು. ಈ ಟೆಂಡರ್‍ನಲ್ಲಿ 8-10 ಏಜೆನ್ಸಿಗಳು ಭಾಗವಹಿಸಿದ್ದು, ದರ ವ್ಯತ್ಯಾಸ ಅನುಮೋದನೆಯಾಧ ಕೂಡಲೇ ದೆಹಲಿಯ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಯೊಂದಿಗೆ ಒಪ್ಪಂದ ಕರಾರು ಪತ್ರಕ್ಕೆ ಸಹಿ ಹಾಕಿದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಮತ್ತು ಯೋಜನೆಗೆ ಅವಶ್ಯಕವಾದ ಶೇ.50 ಭೂಮಿಯನ್ನು ವಶಪಡಿಸಿಕೊಳ್ಳಲು ಕ್ರಮವಹಿಸಲಾಗಿದೆ. ಇನ್ನು ಬಾಕಿ ಉಳಿದಿರುವ ಕಾರ್ಯಗಳನ್ನು ಮುಂದಿನ 2 ತಿಂಗಳೊಳಗಾಗಿ ಮುಗಿಸಿ ಬಳಿಕ ಚಾಲನೆ ನೀಡಲಾಗುವುದು ಎಂದರು.
ದಿನ್ನಳ್ಳಿ ರಸ್ತೆಗೆ ಅನುದಾನ ನೀಡಲು ಕ್ರಮ: ರಾಮಾಪುರ- ದಿನ್ನಳ್ಳಿ ಭಾಗದ ರಸ್ತೆಯನ್ನೂ ಪರಿಶೀಲನೆ ನಡೆಸಲಾಗಿದ್ದು, ಈ ಪ್ರದೇಶವು ಅರಣ್ಯ ಪ್ರದೇಶದಿಂದ ಹೆಚ್ಚು ಆವೃತ್ತವಾಗಿರುವುದರಿಂದ ರಸ್ತೆ ಹದಗೆಡಲು ಕಾರಣವಾಗಿದೆ. ಆದರೆ 72 ಕಿ.ಮೀ ಉದ್ದದ ಜಿಲ್ಲಾ ರಸ್ತೆಯನ್ನು ಏಕಕಾಲಕ್ಕೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಈಗಾಗಲೇ 55 ಕೋಟಿ ರೂ. ವೆಚ್ಚದಲ್ಲಿ 55 ಕಿ.ಮೀ ರಸ್ತೆ ಅಭಿವೃದ್ಧಿಯಾಗಿದ್ದು, ಮುಂದಿನ 15 ದಿನಗಳೊಳಗಾಗಿ ಇನ್ನೂ 6 ಕಿ.ಮೀ ರಸ್ತೆ ಅಭಿವೃದ್ಧಿಯಾಗಲಿದೆ. ಬಳಿಕ ಆರ್ಥಿಕ ಇಲಾಖೆ ನೀಡುವ ಅನುದಾನದ ಆಧಾರದ ಮೇಲೆ ರಾಮಾಪುರ - ದಿನ್ನಳ್ಳಿ ಮಾರ್ಗದ ಬಾಕಿ ಉಳಿದಿರುವ 15 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶೀಘ್ರ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಕೊಳ್ಳೇಗಾಲ ವಿಭಾಗದ ಎಇಇ ದೊರಸ್ವಾಮಿ ಮಾತನಾಡಿ, ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ 18 ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಗಾರು ಪ್ರಾರಂಭವಾಗುವ ಮುನ್ನ ಮತ್ತು ಮುಕ್ತಾಯದ ಬಳಿಕ ಪ್ರತಿಮುಳುಗು ಸೇತುವೆಗಳನ್ನು ಪರಿಶೀಲನೆ ನಡೆಸಿ ಶುಚಿತ್ದವ ಅವಶ್ಯಕತೆಯಿರುವೆಡೆ ಶುಚಿತ್ವ ಮತ್ತು ನಿರ್ವಹಣೆ ಅವಶ್ಯವಾಗಿದ್ದಲ್ಲಿ ನಿರ್ವಹಣೆ ಮಾಡುವಂತೆ ಸೂಚಿಸಿದರು.
ಶಾಸಕ ನರೇಂದ್ರ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಗೆ ಸತ್ತೇಗಾಲ - ಉಗನೀಯ ಮತ್ತು ಗುಂಡಾಪುರ – ಮಣಗಳ್ಳಿ ಗ್ರಾಮಗಖ ಸಂಪರ್ಕ ರ್ಸತೆಗಳು ಶೊಚನೀಯ ಸ್ಥಿತಿಗೆ ತಲುಪಿದ್ದು, ಶೀಘ್ರವಾಗಿ ಗ್ರಾಹೋಲ್ ಹಾಕಿ ಅಭಿವೃದ್ಧಿ ಪಡಿಸಲು ಸೂಚಿಸಿದರು. ಇನ್ನು ರಾಮಾಪುರ ರಸ್ತೆಯ ಅಭಿವೃದ್ಧಿಗಾಗಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆ ರಸ್ತೆಯು ನಿರ್ಮಾಣ ವಾದ ಬಳಿಕ ರಸ್ತೆ ಸುಧಾರಿಸಲಿದೆ. ಎಲ್ಲೇಮಾಳ – ಮಹದೇಶ್ವರ ಬೆಟ್ಟ ರಸ್ತೆಯ ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ಮಳೆ ನಿಲುಗಡೆಯಾದ ಕೂಡಲೇ ಎಲ್ಲಾ ರಸ್ತೆಗಳ ಕಾಮಗಾರಿಗಳು ಆರಂಭವಾಗಲಿವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖಾ ಮುಖ್ಯ ಅಭಿಯಂತರ ಶ್ರೀನಿವಾಸ್, ಎಇಇಗಳಾದ ಕುಮಾರ್, ದೊರೆಸ್ವಾಮಿ, ಜೆಇ ರಮೇಶ್, ಪಪಂ ಸದಸ್ಯ ರಾಜೂಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್ ರಾಜೇಶ್ ರಾಜೂ ಇನ್ನಿತರರು ಹಾಜರಿದ್ದರು.