×
Ad

ದೇಶದ ಸುಭದ್ರತೆಗೆ ಧಾರ್ಮಿಕ ನೆಲೆಗಟ್ಟು ಮುಖ್ಯ: ಶಾಸಕ ಬಿ.ವೈ ರಾಘವೇಂದ್ರ

Update: 2017-10-07 23:42 IST

ಶಿಕಾರಿಪುರ, ಅ.7: ಧಾರ್ಮಿಕ ಶ್ರದ್ಧಾ ಕೇಂದ್ರವಾದ ಮಠ ಮಂದಿರಗಳಲ್ಲಿನ ಕಾರ್ಯಗಳಲ್ಲಿ ಯುವಪೀಳಿಗೆ ಸಕ್ರೀಯವಾಗಿ ಪಾಲ್ಗೊಂಡು ಸದೃಢ ಸಮಾಜ ನಿರ್ಮಿಸುವಂತೆ ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

ತಾಲೂಕಿನ ದಿಂಡದಹಳ್ಳಿ ಹಿರೇಮಠದ ಕ್ಷೇತ್ರದಲ್ಲಿ ಶುಕ್ರವಾರ ಲಿಂ.ಶಿವಾನಂದ ಶಿವಾಚಾರ್ಯರ ಪುಣ್ಯಾರಾಧನೆ ಅಂಗವಾಗಿ ನಡೆದ ಹೋಮ ಹವನ ಮತ್ತಿತರ ದಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಸದೃಢ ಸಮಾಜಕ್ಕೆ ಪ್ರತಿಯೊಬ್ಬರಲ್ಲಿಯೂ ಧಾರ್ಮಿಕ ಜಾಗೃತಿ ಅತ್ಯಗತ್ಯ. ದೇಶಕ್ಕೆ ಗುರು ಪರಂಪರೆಯ ಬಹು ದೊಡ್ಡ ಇತಿಹಾಸವಿದ್ದು, ಚಂದ್ರಗುಪ್ತನಿಗೆ ಚಾಣಕ್ಯ, ಛತ್ರಪತಿ ಶಿವಾಜಿಗೆ ಸಮರ್ಥ ರಾಮದಾಸರು, ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ವಿದ್ಯಾರಣ್ಯರ ರೀತಿ ಪ್ರತಿಯೊಬ್ಬ ಯಶಸ್ವಿ ಇತಿಹಾಸ ಪುರುಷರಿಗೆ ಗುರುವಿನ ಮಾರ್ಗದರ್ಶನವಿದೆ ಎಂದು ತಿಳಿಸಿದರು.

ದೇಶದ ಸುಭದ್ರತೆಗೆ ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟು ಮುಖ್ಯವಾಗಿದ್ದು, ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುವಲ್ಲಿ ಸಹಕಾರಿಯಾದ ಪರಂಪರೆ ಧಾರ್ಮಿಕ ನೆಲೆಗಟ್ಟು ನಾಶವಾಗದಂತೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದ ಅವರು, ಯುವಪೀಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಲ್ಲಿ ಧರ್ಮ ಜಾಗೃತಿಯ ಮೂಲಕ ಸದೃಢ ಸಮಾಜ ನಿರ್ಮಾಣವಾಗಲಿದೆ ಈ ದಿಸೆಯಲ್ಲಿ ಮಠ ಮಂದಿರಗಳಲ್ಲಿನ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳಲು ತಿಳಿಸಿದರು.

ದಿವ್ಯ ಸಾನಿದ್ಯ ವಹಿಸಿದ್ದ ಶ್ರೀ ಕ್ಷೇತ್ರದ ಪಶುಪತಿ ಶಿವಾನಂದ ಶಿವಾಚಾರ್ಯ ಮಾತನಾಡಿ, ಆತ್ಮಬಲ ಹೆಚ್ಚಳಕ್ಕೆ ದೈವ ಶಕ್ತಿಯು ಅಗತ್ಯವಾಗಿದೆ. ಮಠ ಮಂದಿರಗಳು ಸಮಾಜದ ಹಿತವನ್ನು ಕಾಪಾಡುವ ಪ್ರಾಮಾಣಿಕ ಉದ್ದೇಶವನ್ನು ಹೊಂದಿದೆ. ಆದ್ಯಾತ್ಮ ಶಕ್ತಿ, ತಪೋನಿಷ್ಠೆಯಿಂದ ವಿಶ್ವದ ಗಮನವನ್ನು ಸೆಳೆಯುವಲ್ಲಿ ಮಠ ಮಂದಿರಗಳು ನಿಷ್ಠೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಸಹಿತ ಗಣ್ಯರನ್ನು ಗೌರವಿಸಲಾಯಿತು. ಸಿದ್ದನಂದೀಶ್ವರ ಸ್ವಾಮೀಜಿ,ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ಮಠದ ಸಹಿತ ವಿವಿಧ ಶ್ರೀಗಳು ಸಾನಿದ್ಯ ವಹಿಸಿದ್ದರು. ಜಿ.ಪಂ ಸದಸ್ಯೆ ರೇಣುಕಾ ಹನುಮಂತಪ್ಪ, ಮುಖಂಡ ಶಿವಪ್ಪಯ್ಯ ಪಟೇಲ್, ನಿಂಬೆಗೊಂದಿ ಸಿದ್ದಲಿಂಗಪ್ಪ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News