×
Ad

ಮುಸ್ಲಿಮ್ ಬಾಂಧವರ ಪ್ರೀತಿ ವಿಶ್ವಾಸಕ್ಕೆ ಆಭಾರಿ: ಜಿ.ಕರುಣಾಕರ ರೆಡ್ಡಿ

Update: 2017-10-08 20:07 IST

ಬಳ್ಳಾರಿ, ಅ.8: ಹರಪನಹಳ್ಳಿ ಕ್ಷೇತ್ರದ ಮುಸ್ಲಿಮ್ ಬಾಂಧವರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಭಾವುಕರಾಗಿ ನುಡಿದಿದ್ದಾರೆ.

ರವಿವಾರ ತಮ್ಮ ನಿವಾಸದಲ್ಲಿ ಹರಪನಹಳ್ಳಿ ಕ್ಷೇತ್ರದ ಅನೇಕ ಮುಸ್ಲಿಮ್ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ನಿರೀಕ್ಷೆಗೂ ಮೀರಿ ನನ್ನನ್ನು ಭೇಟಿಯಾಗಲು ದೂರದಿಂದ ಬಂದಿದ್ದೀರಿ. ನಿಮಗೆ ಹೇಗೆ ಧನ್ಯವಾದ ಹೇಳಬೇಕೊ ಗೊತ್ತಾಗುತ್ತಿಲ್ಲ. ಹರಪನಹಳ್ಳಿ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಯಾವುದೇ ಧರ್ಮ, ಜಾತಿಯ ಜನರನ್ನು ಕೆಗಣಿಸಿಲ್ಲ ಎಂದು ಹೇಳಿದರು.

ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ಹಲವು ರೀತಿಯ ಜನಪರ ಕಾರ್ಯಗಳನ್ನು ಮಾಡಿರುವ ಸಾರ್ಥಕ ಭಾವ ನನ್ನಲ್ಲಿದೆ. ಚುನಾವಣೆಯ ವೇಳೆ ಇದೇ ರೀತಿಯ ಪ್ರೀತಿ ವಿಶ್ವಾಸ ತೋರಿದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಕರುಣಾಕರ ರೆಡ್ಡಿ ತಿಳಿಸಿದರು.

ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸಬೇಕು: ಬಿಜೆಪಿಯ ಮುಸ್ಲಿಮ್ ಮುಖಂಡ ಮಾಬುಸಾಬ್ ಹಾಗೂ ಮಂಡಲ ಅಧ್ಯಕ್ಷ ಹ್ಮದ್ ಮಾತನಾಡಿ, ಹರಪನಹಳ್ಳಿ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಅಪವಾದ ಇದೆ. ಕರುಣಾಕರರೆಡ್ಡಿ ಅವರ ನಿವಾಸಕ್ಕೆ ಬಂದು ನೋಡಿದರೆ ಈ ರೀತಿಯ ಅಪವಾದ ಮಾಡುವವರಿಗೆ ಪಾಠವಾಗಲಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಕರುಣಾಕರರೆಡ್ಡಿ ಅವರನ್ನು ಬೆಂಬಲಿಸುತ್ತೇವೆ. ನಮ್ಮಂತೆ ಇಡೀ ರಾಜ್ಯದ ಮುಸ್ಲಿಮ್ ಬಾಂಧವರು ಬಿಜೆಪಿಯನ್ನು ಬೆಂಬಲಿಸುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಶಕೆ ಕಾಣಬಹುದು ಎಂದರು.

ಅಧಿಕಾರದಲ್ಲಿದ್ದಾಗ ಹಜ್‌ಯಾತ್ರಿಕರಿಗಾಗಿ ಭವನ ಸೇರಿದಂತೆ ಸಮುದಾಯಕ್ಕೆ ಎಲ್ಲ ರೀತಿಯಿಂದಲೂ ಕರುಣಾಕರರೆಡ್ಡಿ ನೆರವಾಗಿದ್ದಾರೆ. ನಾವೆಲ್ಲರೂ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿರುವ ಎಂ.ಪಿ.ರವೀಂದ್ರರಿಗೆ ಬುದ್ಧಿ ಕಲಿಸಬೇಕಾಗಿದೆ ಎಂದು ತಿಳಿಸಿದರು.

ಬಿಜೆಪಿಗೆ ಸೇರ್ಪಡೆ: ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರಾದ ಶಕುಲ್ ಸಾಬ್, ಶಮುನ್, ಇನಾಯತ್‌ಉಲ್ಲಾ, ರಿಝ್ವಾನ್, ಕಲಾಂ, ಸಲಾಂ ಸಾಬ್ ಇನ್ನಿತರರುತಮ್ಮ ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ದಾವಣಗೆರೆ ಜಿಲ್ಲಾಧ್ಯಕ್ಷ, ಉಪಾಧ್ಯಕ್ಷ, ತಾಲೂಕು ಘಟಕಗಳ ಅಧ್ಯಕ್ಷರು, ಮಹಿಳಾ ಮೋರ್ಚಾ ಪದಾಧಿಕಾರಿಗಳು, ನಗರಸಭೆ ಹಾಗೂ ಪುರಸಭೆಯ ಹಾಲಿ, ಮಾಜಿ ಸದಸ್ಯರು ಮತ್ತು ಮುಸ್ಲಿಮ್ ಸಮುದಾಯದ ಮುಖಂಡರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News