ತಾಕತ್ತಿದ್ದರೆ ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ: ಜಮೀರ್ ಅಹ್ಮದ್
ತುಮಕೂರು, ಸೆ.8: ಎಚ್.ಡಿ.ರೇವಣ್ಣ ಬೇರೆಯವರ ಮೇಲೆ ಇಲ್ಲಸಲ್ಲದ ಮಾತುಗಳನ್ನಾಡುವುದು ಬಿಟ್ಟು ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲವು ಪಡೆಯಲಿ ಎಂದು ಏಕವಚನದಲ್ಲೇ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ದೇವೇಗೌಡ ಅವರ ಋಣ ನನ್ನ ಮೇಲಿದೆ. ಅವರನ್ನು ಬಿಟ್ಟು ಬೇರೆ ಯಾರು ನನ್ನ ಬಗ್ಗೆ ಹೇಳುವ ಅಧಿಕಾರವಿಲ್ಲ. ರೇವಣ್ಣ ನಿಮ್ಮ ಬಗೆಗಿನ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಬೇಕಾಗುತ್ತದೆ, ಇದೇ ನಮ್ಮ ಕೊನೆಯ ಎಚ್ಚರಿಕೆ ಎಂದು ಗುಡುಗಿದರು.
ರಾಜಕೀಯಕ್ಕೆ ನನಗೆ ಕರೆತಂದಿದ್ದು ರೇವಣ್ಣ ಅವರು ಅಲ್ಲ. ಒಂದು ಸ್ವಾಮೀಜಿ ಅವರು ನೀನು ಸಮಾಜ ಸೇವೆ ಮಾಡಲು ಪಕ್ಷಕ್ಕೆ ಸೇರಬೇಕು ಎಂದು ಹೇಳಿ ದೇವೇಗೌಡ ಅವರಿಗೆ ಭೇಟಿಟಿಯಾಗಿ ಜನತಾದಳಕ್ಕೆ ಸೇರ್ಪಡೆಯಾಗು ಎಂದು ಹೇಳಿ ರಾಜಕೀಯಕ್ಕೆ ಸೇರಿಸಿದರು. ದೇವೇಗೌಡ ಅವರು ನನ್ನ ರಾಜಕೀಯ ಗುರುಗಳು ಅವರ ಮೇಲೆ ನನಗೆ ಅಪಾರ ಗೌರವವಿದೆ. ಜನತಾದಳದಲ್ಲಿ ಯಾರಿಗೂ ಬೆಳೆಯಲು ಬಿಡುವುದಿಲ್ಲ. ಬೆಳೆದರೆ ಸಹಿಸುವುದಿಲ್ಲ. ಅಷ್ಟೆ ಅಲ್ಲದೆ ನಾನು ಜನತಾದಳದಲ್ಲಿದ್ದ ಸಮಯದಲ್ಲಿ ನಾನೇ ಜಂಬದಿಂದ ಹೇಳುತ್ತಿದ್ದೆ. ಜೆಡಿಎಸ್ ಪಕ್ಷ ಒಂದು ರೀತಿಯಲ್ಲಿ ರಾಜಕೀಯದ ಬಗ್ಗೆ ತರಬೇತಿ ನೀಡುವ ಪಕ್ಷವಾಗಿದೆ. ಕೆಲವು ಕಾಲ ಇದ್ದು ಅನಂತರದಲ್ಲಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದು ಈಗ ಗೋತ್ತಾಗುತ್ತಾ ಇದೆ. ಜೆಡಿಎಸ್‍ನಲ್ಲಿ ಇಷ್ಟೊಂದು ಕಾಲೆಳೆದರೆ ಯಾರು ತಾನೆ ಸಹಿಸಿಕೊಂಡು ಇರಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮಂತ್ರಿ ಎಚ್.ಡಿ.ರೇವಣ್ಣ ಅವರು ತಮ್ಮ ಸ್ವಂತ ಅಣ್ಣನಿಗೆಯೇ ಟೋಪಿ ಹಾಕಿದವರು. ದೇವೇಗೌಡ ಅವರು ಸರಿಯಾದ ಬೆಂಬಲ ನೀಡದ ಸಂದರ್ಭದಲ್ಲಿ ಕುಮಾರಸ್ವಾಮಿಯ ಬೆಂಬೆಲವನ್ನು ಪಡೆದುಕೊಂಡು ಪ್ರಬಲವಾದ ಮೂರು ಖಾತೆಯನ್ನು ಪಡೆದುಕೊಂಡು ಮಂತ್ರಿಯಾಗಿದ್ದವರು. ಒಟ್ಟಾರೆಯಾಗಿ ಟೋಪಿ ಹಾಕುವ ಅಭ್ಯಾಸ ಅವರಿಗೆ ಹೊರೆತು ನನಗಿಲ್ಲ. ಜೆಡಿಎಸ್ ಬಿಡಬೇಕೆಂದು ಕನಸಲ್ಲಿಯು ಅಂದುಕೊಂಡಿರಲಿಲ್ಲ. ಆದರೆ ಜೆಡಿಎಸ್‍ನಿಂದ ಹೊರಹಾಕಬೇಕು ಎಂದು ನಿರ್ಧಾರ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ನಾನು ಜನತಾದಳವನ್ನು ತೋರೆಯಬೇಕು ಎಂದು ನಿರ್ಧಾರ ಮಾಡಿಕೊಂಡು ಕಾಂಗ್ರೆಸ್‍ಗೆ ಬಂದೆ ಎಂದು ಸ್ಪಷ್ಟಪಡಿಸಿದರು.
ನನ್ನ ಪಕ್ಷ ಕಾಂಗ್ರೆಸ್, ನನ್ನ ಗುರಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ನಾನು ಯಾವ ಪಕ್ಷದಲ್ಲಿದ್ದರೆ ಆ ಪಕ್ಷದ ಪರವಾಗಿ ಉತ್ತಮ ಕೆಲಸ ಮಾಡಲು ನೋಡುತ್ತೇನೆ. ಅಧಿಕಾರ ಬೇಕು ಎಂದು ಹಠ ನನಗಿಲ್ಲ. ಪ್ರಸ್ತುತ ನನ್ನ ಪಕ್ಷ ಕಾಂಗ್ರೆಸ್, ನಾನೆಂದು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಈಗಿರುವ ಗುರಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಷ್ಟೆ. ಅಧಿಕಾರಿ ಆಸೆ ನನ್ನಲ್ಲಿಲ್ಲ, ಬರೀ ಸಮಾಜ ಸೇವೆಯೇ ರಾಜಕೀಯದ ಉದ್ದೇಶ ಎಂದು ಹೇಳಿದರು.
ಜೆಡಿಎಸ್‍ನಲ್ಲಿ ಯಾವತ್ತು ನನ್ನನ್ನು ನಾಯಕನಾಗಿ ಗುರುತಿಸಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ಜಮೀರ್ ಅಹ್ಮದ್ ಮುಸ್ಲಿಂ ನಾಯಕ ಎಂದು ಗುರುತಿಸಿದ್ದಾರೆ. ಜನಪರ ಕಾಳಜಿ ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್. ತುಮಕೂರು ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 9-11 ರಲ್ಲಿ ಗೆಲವು ಪಡೆಯಬೇಕು ಎಂಬುದು ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಶಫಿ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.