ವಿಚಾರಣೆಗೆ ಗೈರು: ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಗೆ ವಾರಂಟ್
ಶಿವಮೊಗ್ಗ, ಅ.8: ತಾವೇ ದಾಖಲಿಸಿದ್ದ ಪ್ರಕರಣವೊಂದರ ವಿಚಾರಣೆಗೆ ಸಮರ್ಪಕವಾಗಿ ಹಾಜರಾಗದ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ದ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅವರಿಗೆ ಜಿಲ್ಲೆಯ ಭದ್ರಾವತಿ ಹಿರಿಯ ಸಿವಿಲ್ ವಿಭಾಗೀಯ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
ಪ್ರಕರಣ: ಈ ಹಿಂದೆ ಪ್ರೊ.ಮಲ್ಲಿಕಾ ಘಂಟಿ ಅವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅವರ ನಾಲ್ವರು ಸಹೋದ್ಯೋಗಿಗಳು ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರೊ.ಮಲ್ಲಿಕಾ ಘಂಟಿ ಅವರ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ್ದರು. 'ವಿಮರ್ಶಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆಯಾದಂತೆ ಪ್ರೊ.ಮಲ್ಲಿಕಾ ಘಂಟಿಯೂ ಹತ್ಯೆಯಾಗಬೇಕು' ಎಂದು ಮಾತನಾಡಿದ್ದರು. ಇದನ್ನು ಮತ್ತೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನು ಪ್ರೊ.ಮಲ್ಲಿಕಾ ಘಂಟಿ ಅವರಿಗೆ ನೀಡಿದ್ದರು.
ಈ ಧ್ವನಿ ಮುದ್ರಿಕೆಯ ಆಧಾರದ ಮೇಲೆ ಪ್ರೊ. ಮಲ್ಲಿಕಾ ಘಂಟಿ ಅಂದಿನ ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ.ಚೆನ್ನಣ್ಣನವರ್‌ಗೆ ದೂರು ನೀಡಿದ್ದರು. ಕಾನೂನು ರೀತಿಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಈ ದೂರಿನ ಆಧಾರದ ಮೇಲೆ 2015 ಅ.10ರಂದು ಕುವೆಂಪು ವಿವಿಯ ನಾಲ್ವರು ಸಿಬ್ಬಂದಿಯ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯು ಜಿಲ್ಲೆಯ ಭದ್ರಾವತಿ ಹಿರಿಯ ಸಿವಿಲ್ ವಿಭಾಗೀಯನ್ಯಾಯಾಲಯದಲ್ಲಿ ನಡೆಯುತ್ತಿದ್ದು, ವಿಚಾರಣೆಗೆ ಪ್ರೊ. ಮಲ್ಲಿಕಾ ಘಂಟಿ ಅವರು ಸರಿಯಾಗಿ ಆಗಮಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿದೆ.