×
Ad

ವಿಜೃಂಭಣೆಯಿಂದ ನೆರವೇರಿದ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ

Update: 2017-10-08 23:28 IST

ಮೈಸೂರು, ಅ.6: ಕತ್ತಲ ನಡುವೆಯೇ ರಂಗುರಂಗಿನ ಬೆಳಕಿನ ಚಿತ್ತಾರ ಸಹಸ್ರಾರು ಭಕ್ತರ ಮೊಗದಲ್ಲಿ ಮಿನುಗಿದ ಮಂದಹಾಸ. ಕಣ್ಣುಗಳಲ್ಲಿ ಧನ್ಯತೆಯ ಭಾವ ಇವೆಲ್ಲ ಮೇಳೈಸಿದ್ದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ದೇವಿಕೆರೆಯಲ್ಲಿ. ಶನಿವಾರ ಸಂಜೆ ಸೂರ್ಯಾಸ್ತಮಾನವಾಗುತ್ತಿದ್ದಂತೆ ಇತ್ತ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸಹಸ್ರಾರು ಭಕ್ತರು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಸಿಕೊಂಡು ಭಕ್ತಿಸಂಗಮದಲ್ಲಿ ಮಿಂದೆದ್ದರು. ಶನಿವಾರ ಬೆಳಿಗ್ಗೆ ಅಮ್ಮನವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ರಥಬೀದಿಯ ಮೂಲಕ ದೇವಿಕೆರೆಯ ಅಂಗಳಕ್ಕೆ ಮೆರವಣಿಗೆಯ ಮೂಲಕ ಸಾಗಿ ಬಂತು. ಅಲ್ಲಿ ಸಂಜೆಯತನಕವೂ ದೇವಿಗೆ ಪೂಜೆ ಪುನಸ್ಕಾರಗಳು ನಡೆದವು.

ಸಂಜೆ 7 ಗಂಟೆಯ ನಂತರ ಅಮ್ಮನವರ ಮೂರ್ತಿಯನ್ನು ತೆಪ್ಪದಲ್ಲಿ ಕುಳ್ಳಿರಿಸಿ ದೇವಿಕೆರೆಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಪೊಲೀಸ್ ಬ್ಯಾಂಡ್ ನಿಂದ ಹೊರಟ ಸಂಗೀತ ಭಕ್ತರ ಮನಕ್ಕೆ ಮುದ ನೀಡಿತು. ಅಮ್ಮನವರ ಮೂರ್ತಿಯನ್ನು ತೆಪ್ಪದಿಂದ ಇಳಿಸಿ ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಚಾಮುಂಡಿಬೆಟ್ಟಕ್ಕೆ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News