ಧರ್ಮದ ಹೆಸರಿನಲ್ಲಿ ಶೋಷಿತರ ಮೇಲೆ ದೌರ್ಜನ್ಯ: ಕೆ.ಮಾಯಿಗೌಡ
ಮಂಡ್ಯ, ಅ.8: ಜಾತಿ, ಧರ್ಮದ ಹೆಸರಿನಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಚಾರವಾದಿ ಕೆ.ಮಾಯಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಬೆಳಕು ಸಮಾಜ ವತಿಯಿಂದ ರವಿವಾರ ಏರ್ಪಡಿಸಿದ್ದ ಗಂಗಾರಾಂ ಚಾಂಡಾಳ ಸಂಪಾದಕತ್ವದ 'ಚಲೋ ಉಡುಪಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆಯಿಂದ ಸಣ್ಣ, ಅತಿಸಣ್ಣ ಸಮುದಾಯಗಳು ಹೆಚ್ಚು ಶೋಷಣೆಗೊಳಗಾಗತ್ತಿದ್ದು, ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದುಹಾಕದ ಹೊರತು ಸಮಾನತೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಧರ್ಮ ಮನುಷ್ಯನನ್ನು ಪರಿಪೂರ್ಣ, ಜ್ಞಾನವಂತನನ್ನಾಗಿ ಮಾಡಬೇಕು. ಆದರೆ, ಧರ್ಮದ ಹೆಸರಿನಲ್ಲಿ ಕ್ರೂರತೆ ಮೆರೆಯುತ್ತಿದ್ದು ಮಾನವೀಯತೆ ಮರೆಯಾಗುತ್ತಿದೆ. ಮನುಷ್ಯ ಯೋಜನಾ ಶಕ್ತಿ ಕಳೆದುಕೊಳ್ಳುತ್ತಿದ್ದಾನೆ ಎಂದವರು ಆತಂಕ ವ್ಯಕ್ತಪಡಿಸಿದರು.
ಧರ್ಮ ಮತ್ತು ಜಾತಿ ವ್ಯವಸ್ಥೆಯು ಯಾವ ಮಟ್ಟಿಗೆ ಸಮಾಜದಲ್ಲಿ ಗಟ್ಟಿಗೊಳ್ಳುತ್ತಿದೆ ಎಂದರೆ, ದಲಿತ ಕೇರಿಯ ನಾಯಿ ಬೊಗಳಿದರೂ ದಲಿತರನ್ನು ಹತ್ಯೆ ಮಾಡುವಂತಹ ಪರಿಸ್ಥಿತಿಗೆ ತಲುಪಿದ್ದೇವೆ ಎಂದು ಅವರು ವಿಷಾದಿಸಿದರು.
ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರು, ಸಾಹು ಮಹಾರಾಜ, ಕುವೆಂಪುರಂತಹ ಮಹನೀಯರು, ಬ್ರಿಟೀಷ್ ಆಡಳಿತಶಾಹಿಯಿಂದ ದಲಿತ, ಹಿಂದುಳಿದವರಿಗೂ ಶಿಕ್ಷಣ ದೊರೆಯಿತು ಜತೆಗೆ, ಮೀಸಲಾತಿಯೂ ಬಂದಿತು ಎಂದು ಅವರು ವಿಶ್ಲೇಷಿಸಿದರು.
ಕೃತಕ ಕನಕನ ಕಿಂಡಿ: ಉಡುಪಿಯ ಕನಕನ ಕಿಂಡಿ ಕೃತಕವಾಗಿ ನಿರ್ಮಿಸಿದ್ದು, ಕೃಷ್ಣ ದೇಗುಲಕ್ಕೆ ಬ್ರಾಹ್ಮಣರಿಗೆ ಮಾತ್ರ ಪ್ರವೇಶವಿತ್ತು. ಹಿಂದುಳಿದ ವರ್ಗದ ಭಕ್ತರೂ ದೇವಾಲಯ ಪ್ರವೇಶಕ್ಕೆ ಮುಂದಾದರು. ಆಗ ಬ್ರಾಹ್ಮಣರು ಗೋಡೆಯನ್ನು ಉಳಿಯಿಂದ ಕೊರೆದು ಕಿಂಡಿ ಮಾಡಿ ಮೂರ್ತಿಯನ್ನು ತಿರುಗಿಸಿ ಹಿಂದುಳಿದ ವರ್ಗದವರು ದೇವಸ್ಥಾನದ ಹೊರಗಿನಿಂದಲೇ ದರ್ಶನ ಪಡೆಯಲು ಅನುವು ಮಾಡಿದರು. ಈಗಲೂ ಕನಕನ ಕಿಂಡಿ ಸುತ್ತ ಉಳಿಯಿಂದ ಬಿದ್ದ ಏಟಿನ ಗುರುತುಗಳಿವೆ ಎಂದು ಮಾಯಿಗೌಡರು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಎಸ್.ಚಂದ್ರಶೇಖರ್, ಎಂ.ಸಿ.ಶಿವರಾಜು, ಸಿದ್ದಯ್ಯ, ಎಂ.ಬಿ.ನಾಗಣ್ಣಗೌಡ, ಗಂಗಾರಾಂ ಚಂಡಾಳ, ಪ್ರಕಾಶಕಿ ಪ್ರದ್ಮಶ್ರೀ, ಮಾಣಿಕ್ಯನಹಳ್ಳಿ ಜಯರಾಮ್, ಇತರ ಗಣ್ಯರು ಉಪಸ್ಥಿತರಿದ್ದರು.