ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿ: ಪ್ರಭಾಕರ್
ಮೂಡಿಗೆರೆ, ಅ.8: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಮೂಡಿಗೆರೆ ರೋಟರಿ ಮಾಜಿ ಅಧ್ಯಕ್ಷ ಬಿ.ಎಲ್. ಪ್ರಭಾಕರ್ ಸಲಹೆ ನೀಡಿದ್ದಾರೆ.
ಮೂಡಿಗೆರೆ ಕ್ಲಬ್ ಆವರಣದಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಕೇವಲ ಪುಸ್ತಕದ ಪಠ್ಯವನ್ನು ಹೇಳುವುದಕ್ಕಷ್ಟೇ ಸೀಮಿತವಾಗಬಾರದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೂಡಿಗೆರೆ ರೋಟರಿ ಅಧ್ಯಕ್ಷ ಬಿ.ಎಂ.ಮಂಜುನಾಥ್ ಮಾತನಾಡಿ, ರೋಟರಿ ಸಂಸ್ಥೆ ಕಳೆದ ಸಾಲಿನಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಮೊದಲ ಅದ್ಯತೆ ನೀಡುತ್ತಿದೆ. ಈ ಹಿಂದೆ ಪೊಲೀಯೋ ನಿರ್ಮೂಲನೆಯನ್ನು ತನ್ನ ಆದ್ಯತಾ ಕಾರ್ಯಕ್ರಮವಾಗಿ ತೆಗೆದುಕೊಂಡು ಸರಕಾರದೊಂದಿಗೆ ಕೈಜೋಡಿಸಿದ ಪರಿಣಾಮವಾಗಿ ಇಂದು ನಮ್ಮ ದೇಶದಲ್ಲಿ ಪೊಲೀಯೋ ನಿರ್ಮೂಲನೆ ಆಗಿದೆ ಎಂದು ಹೇಳಿದರು.