ಶಿವಮೊಗ್ಗ: ಕಳಪೆ ಗುಣಮಟ್ಟದ ಆಹಾರ ಪೂರೈಕೆ
ಶಿವಮೊಗ್ಗ, ಅ.9: ಶಿವಮೊಗ್ಗ ಹಾಗೂ ಸಾಗರ ತಾಲೂಕುಗಳಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಡಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಸ್ಟೆಲ್‌ಗಳ ಮೇಲೆ ಜಿಲ್ಲಾಡಳಿತ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಒಟ್ಟು 12 ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗವಹಿಸಿತ್ತು. ಸುಮಾರು 60ಕ್ಕೂ ಅಧಿಕ ನೌಕರರನ್ನು ಕಾರ್ಯಾಚರಣೆಗೆ ತೊಡಗಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಹಾಸ್ಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ ಎಂಬ ಆರೋಪದ ಮೇರೆಗೆ ಜಿಲ್ಲಾಡಳಿತವು ಈ ಭಾರೀ ಪ್ರಮಾಣದ ಕಾರ್ಯಾಚರಣೆ ನಡೆಸಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಆದರೆ ಕಾರ್ಯಾಚರಣೆಯ ಬಗ್ಗೆ ಇಲ್ಲಿಯವರೆಗೂ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕಾರ್ಯಾಚರಣೆಯ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಗುಪ್ತವಾಗಿಡಲಾಗಿತ್ತು: ಶಿವಮೊಗ್ಗ ಹಾಗೂ ಸಾಗರ ತಾಲೂಕು ವ್ಯಾಪ್ತಿಯಲ್ಲಿರುವ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಡಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಸ್ಟೆಲ್‌ಗಳ ಮೇಲೆ ದಾಳಿ ನಡೆಸುವ ಮಾಹಿತಿ ಸೋರಿಕೆಯಾಗದಂತೆ ಜಿಲ್ಲಾಡಳಿತ ವ್ಯಾಪಕ ಕಟ್ಟೆಚ್ಚರ ವಹಿಸಿತ್ತು.
ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿರಲಿಲ್ಲ ಎನ್ನಲಾಗಿದೆ. ಡಿಸಿ ಹಾಗೂ ಸಿಇಒ ಅವರು ದಾಳಿಯ ರೂಪುರೇಷೆ ಸಿದ್ಧಪಡಿಸಿದ್ದರು. ಮೊದಲೇ ಸಿದ್ಧಪಡಿಸಿಟ್ಟುಕೊಂಡ ರೂಪುರೇಷೆಯಂತೆ ಎರಡು ತಾಲೂಕುಗಳ ಹಾಸ್ಟೆಲ್‌ಗಳ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯಲ್ಲಿ ಈ ಇಬ್ಬರು ಅಧಿಕಾರಿಗಳು ಭಾಗಿಯಾಗಿ, ಪರಿಶೀಲಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ದಿಢೀರ್ ದಾಳಿಯ ವೇಳೆ ಬಹುತೇಕ ಹಾಸ್ಟೆಲ್‌ಗಳಲ್ಲಿ ಕಳಪೆ ಹಾಗೂ ನಿಗದಿತ ಗುಣಮಟ್ಟದ ಆಹಾರ ಪೂರೈಕೆಯಾಗದಿರುವುದು ಕಂಡುಬಂದಿದೆ. ಹಾಗೆಯೇ ಆಹಾರ ಪೂರೈಕೆಯಲ್ಲಿ ನಿಯಮಾವಳಿಗಳ ಉಲ್ಲಂಘನೆಯಾಗಿದ್ದು ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಅಧಿಕಾರಿಗಳ ತಂಡದ ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.
ತಲಾ ಆರು ತಂಡ: ಶಿವಮೊಗ್ಗ ತಾಲೂಕು ಹಾಗೂ ಸಾಗರ ತಾಲೂಕಿಗೆ ಹಿರಿಯ ಅಧಿಕಾರಿಗಳನ್ನೊಳಗೊಂಡ ತಲಾ ಆರು ತಂಡಗಳ ನಿಯೋಜನೆ ಮಾಡಲಾಗಿತ್ತು. ಈ ಎಲ್ಲ ತಂಡಗಳು ಏಕಕಾಲಕ್ಕೆ ಹಾಸ್ಟೆಲ್‌ಗಳ ಮೇಲೆ ದಾಳಿ ನಡೆಸಿ, ಆಹಾರದ ಗುಣಮಟ್ಟ ಹಾಗೂ ಆಹಾರ ಪೂರೈಕೆಯಲ್ಲಿ ನಿಯಮಾವಳಿಗಳ ಪಾಲನೆ ಮಾಡಲಾಗುತ್ತಿದೆಯೇ ಎಂಬುವುದನ್ನು ಪರಿಶೀಲಿಸಿದೆ ಎನ್ನಲಾಗಿದೆ.
ಭಾರೀ ಸಂಚಲನ: ಜಿಲ್ಲಾಡಳಿತವು ಇದೇ ಪ್ರಪ್ರಥಮ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಸರಕಾರಿ ಹಾಸ್ಟೆಲ್‌ಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದು, ಜಿಲ್ಲೆಯ ಹಾಸ್ಟೆಲ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ದಾಳಿಯ ವಿಷಯ ತಿಳಿಯುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ಎಲ್ಲಿ ತಮ್ಮ ಹಾಸ್ಟೆಲ್‌ಗಳ ಮೇಲೆಯೂ ದಾಳಿ ನಡೆಯಲಿದೆಯೋ ಎಂಬ ಆತಂಕದಲ್ಲಿದ್ದುದು ಕಂಡುಬಂದಿತು.
ಭ್ರಷ್ಟ ಅಧಿಕಾರಿಗಳು ಭಾಗಿ: ಆರೋಪ
ಶಿವಮೊಗ್ಗ ಜಿಲ್ಲೆಯ ಸರಕಾರಿ ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆಯ ವ್ಯವಹಾರವು ಬಹುಕೋಟಿ ರೂ. ಮೊತ್ತದ್ದಾಗಿದೆ.ಇದಕ್ಕಾಗಿಯೇ ಆಹಾರ ಪೂರೈಕೆಯ ಟೆಂಡರ್ ಹಿಡಿಯಲು ಗುತ್ತಿಗೆದಾರರ ನಡುವೆ ಸಾಕಷ್ಟು ಪೈಪೋಟಿ ಕಂಡುಬರುತ್ತಿದೆ. ಆದರೆ ಕೆಲವೆಡೆ ಸರಕಾರಿ ಹಾಸ್ಟೆಲ್‌ಗಳಿಗೆ ಪೂರೈಕೆಯಾಗುವ ಆಹಾರದಲ್ಲಿ ಗುಣಮಟ್ಟ ಇಲ್ಲದಿರುವುದು ಹಾಗೂ ನಿಯಮಾವಳಿಗಳಿಗೆ ಅನುಗುಣವಾಗಿ ಆಹಾರ ಪೂರೈಕೆಯಾಗದಿರುವುದು ಕಂಡುಬರುತ್ತಿದೆ.
ಕೆಲ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳಿಗೆ ಇಂತಿಷ್ಟು ಹಣ ನೀಡಿ ಅವರ ಮೂಲಕವೇ ಆಹಾರ ಪೂರೈಕೆಯನ್ನು ಕೆಲ ಗುತ್ತಿಗೆದಾರರು ಮಾಡುತ್ತಿದ್ದಾರೆಂಬ ಮಾಹಿತಿಯೂ ಇದೆ. ಕೆಲ ಭ್ರಷ್ಟ ಅಧಿಕಾರಿಗಳು ಈ ಅವ್ಯವಹಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.