ಅರ್ಚಕ ಹುದ್ದೆ: ದಲಿತರೊಳಗೊಂದು ಹೊಸ ಜಾತಿ ಸೃಷ್ಟಿಯಾಗದಿರಲಿ

Update: 2017-10-09 19:01 GMT

ಮೇಲ್ವರ್ಣೀಯರ ಒಂದು ಗುಂಪಿನ ವಿರೋಧದ ನಡುವೆಯೇ ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತದ ದೇವಾಲಯಗಳಲ್ಲಿ ಹಿಂದುಳಿದ ಸಮುದಾಯದ ಅರ್ಚಕರನ್ನು ನೇಮಿಸಲು ಕೇರಳ ಸರಕಾರ ನಿರ್ಧರಿಸಿದೆ. ನೇಮಕಗೊಳ್ಳಲಿರುವ 36ಅಭ್ಯರ್ಥಿಗಳು ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಜಾತಿಯನ್ನು ಸುತ್ತಿಕೊಂಡಿರುವ ಹಿಂದೂ ಧರ್ಮದೊಳಗೆ ಇದೊಂದು ಸಂಚಲನ ಸೃಷ್ಟಿಸುವ ಬೆಳವಣಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ದಲಿತನೊಬ್ಬ ದೇವಸ್ಥಾನದ ಆವರಣದೊಳಗೆ ಪ್ರವೇಶಿಸುವುದೇ ಅಪರಾಧ ಎನ್ನುವ ವಾತಾವರಣವಿರುವ ನೆಲದಲ್ಲಿ, ದಲಿತನೊಬ್ಬ ಅರ್ಚಕನಾಗಿ ಗರ್ಭಗುಡಿಗೆ ಕಾಲಿಡುತ್ತಾನೆ ಎನ್ನುವುದು ಕ್ರಾಂತಿಕಾರಿ ನಡೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಅಸ್ಪಶ್ಯತೆಯ ನಿವಾರಣೆಯಲ್ಲಿ ಇದು ತನ್ನದೇ ಆದ ಪರಿಣಾಮಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಕೇರಳದಲ್ಲಿ ನಾರಾಯಣ ಗುರುಗಳು, ಈಳವರಿಗೆ ತಮ್ಮದೇ ದೇವಸ್ಥಾನಗಳನ್ನು ಕಟ್ಟಿ, ತಮ್ಮದೇ ಈಳವ ಜಾತಿಯ ಅರ್ಚಕರನ್ನು ಸಿದ್ಧಗೊಳಿಸಿದ್ದು ಈ ಸಂದರ್ಭದಲ್ಲಿ ನೆನೆಯಬೇಕು. ಜನಿವಾರ ಹಾಕಿದ ಅರ್ಚಕರಿಗೆ ಪರ್ಯಾಯವಾಗಿ, ಜನಿವಾರ ಹಾಕದ ಅರ್ಚಕರನ್ನು ತಯಾರು ಮಾಡಿ ಅವರನ್ನು ‘ಶಾಂತಿ’ ಎಂದು ಕರೆದರು. ಆದರೆ ಇತ್ತೀಚಿನ ದಿನಗಳಲ್ಲಿ, ನಾರಾಯಣ ಗುರುಗಳು ನಿರ್ಮಿಸಿದ ದೇವಸ್ಥಾನಗಳಲ್ಲೂ ಜನಿವಾರ ಹಾಕಿದ ಬ್ರಾಹ್ಮಣ ಅರ್ಚಕರು ತಲೆತೂರಿಸಿದ್ದಾರೆ ಎನ್ನುವುದು ಇನ್ನೊಂದು ವಿಪರ್ಯಾಸ.

ಕೇರಳ ಸರಕಾರ ಸದ್ಯಕ್ಕೆ ನಾರಾಯಣ ಗುರುಗಳು ತೋರಿಸಿದ ಹಾದಿಯನ್ನು ಮುಂದುವರಿಸಿದೆ ಮಾತ್ರವಲ್ಲ, ಇನ್ನೊಂದು ದೊಡ್ಡ ಹೆಜ್ಜೆಯನ್ನು ಇಡಲು ಮುಂದಾಗಿದೆ. ಯಾಕೆಂದರೆ ಸರಕಾರದ ನಿರ್ಧಾರ ಕೇವಲ ಈಳವ ಜಾತಿಗೆ ಅಷ್ಟೇ ಸೀಮಿತವಾಗಿಲ್ಲ. ದಲಿತ ಅರ್ಚಕರನ್ನು ಸಮಾಜ ಒಪ್ಪಿಕೊಂಡದ್ದೇ ಆದರೆ, ಇದು ದಲಿತರೊಳಗೆ ಹೊಸ ಆತ್ಮವಿಶ್ವಾಸವನ್ನು, ಆತ್ಮಾಭಿಮಾನವನ್ನು ಬಿತ್ತುವುದರಲ್ಲಿ ಸಂಶಯವಿಲ್ಲ. ಇದೇ ಸಂದರ್ಭದಲ್ಲಿ ದಲಿತ ಅರ್ಚಕರನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಯಾಕೆಂದರೆ, ಸರಕಾರ ಮೀಸಲಾತಿಯ ಮೂಲಕ ಆದೇಶ ನೀಡಿ ದಲಿತನನ್ನು ತರಬೇತಿಗೊಳಿಸಿ ಅರ್ಚಕನನ್ನಾಗಿಸಬಹುದು. ಆದರೆ ದೇವಸ್ಥಾನವೆನ್ನುವುದು ಯಾವುದೇ ಸರಕಾರ ಕಚೇರಿಯಲ್ಲ ಆದುದರಿಂದ, ದಲಿತ ಅರ್ಚಕನನ್ನು ಸಮಾಜ ಮುಕ್ತವಾಗಿ ಒಪ್ಪದೇ ಆತ ಅಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗಬಹುದು.

ನಂಬಿಕೆಯನ್ನು ಕಾನೂನಿನ ಆದೇಶಗಳ ಮೂಲಕ ಜಾರಿಗೊಳಿಸುವುದು ಕಷ್ಟ. ವೌಢ್ಯಾಚರಣೆಗಳನ್ನು ಕಾನೂನಿನ ಮೂಲಕ ತಡೆಯಬಹುದಾದರೂ, ಈ ನೆಲದಲ್ಲಿ ಕೆಲವು ಧಾರ್ಮಿಕ ನಂಬಿಕೆಗಳು ಬೇರಿನಿಂದಲೇ ಅಸ್ಪಶ್ಯತೆಯೊಂದಿಗೆ ತಲೆಯೆತ್ತಿಕೊಂಡು ಬಂದಿವೆ. ಆದುದರಿಂದ ದಲಿತ ಅರ್ಚಕರನ್ನು ಸಮಾಜ ವಿಶಾಲಭಾವದಿಂದ ಸ್ವೀಕರಿಸಿದಾಗಷ್ಟೇ ಈ ಆದೇಶ ಸಂಪೂರ್ಣ ಯಶಸ್ಸನ್ನು ಪಡೆಯಬಹುದು. ಇಲ್ಲವಾದರೆ ದೇವಾಸ್ಥಾನದೊಳಗೇ ಸಂಘರ್ಷಗಳು ಆರಂಭವಾಗಬಹುದು. ದೇವಸ್ಥಾನದೊಳಗೆ ಅರ್ಚಕರೇ ಅಸ್ಪಶ್ಯತೆಯನ್ನು ಎದುರಿಸುತ್ತಾ, ಕೀಳರಿಮೆಯಿಂದ ಬದುಕುವ ಸನ್ನಿವೇಶ ನಿರ್ಮಾಣವಾಗಬಹುದು. ಭಕ್ತರು ಅವರ ಕೈಯಿಂದ ಪ್ರಸಾದವನ್ನೇ ಸ್ವೀಕರಿಸದಿದ್ದರೆ ಅಥವಾ ಭಕ್ತರು ಅವರಿರುವ ದೇವಸ್ಥಾನಕ್ಕೆ ಹೋಗುವುದಕ್ಕೆ ಇಷ್ಟ ಪಡದಿದ್ದರೆ ಕಾನೂನಿನ ಮೂಲಕ ಅವರನ್ನು ದೇವಸ್ಥಾನದೊಳಗೆ ಪ್ರವೇಶ ಮಾಡಿಸುವ ಅಧಿಕಾರ ಸರಕಾರಕ್ಕಿರುವುದಿಲ್ಲ.

 ದಲಿತ ಅರ್ಚಕರು ಎದುರಿಸುವ ಬಿಕ್ಕಟ್ಟು ಸರಕಾರ ಯೋಚಿಸಿದಷ್ಟು ಸರಳವಾಗಿಲ್ಲ. ದೇವಸ್ಥಾನಗಳಲ್ಲಿ ಈ ದಲಿತರು ತಮ್ಮ ನಂಬಿಕೆಯನ್ನು ಆಚರಿಸುವಂತಿಲ್ಲ ಎನ್ನುವುದು ಮುಖ್ಯ ಅಂಶ. ತಮ್ಮ ದೇವರು, ದಿಂಡರು, ಆಚರಣೆಗಳನ್ನು ಕೈ ಬಿಟ್ಟು ಇನ್ನೊಂದು ಸಂಸ್ಕೃತಿಯನ್ನು ಬಲವಂತವಾಗಿ ಒಪ್ಪಿಕೊಳ್ಳುವಂತಹ ಸ್ಥಿತಿ ಇವರದು. ಒಂದು ರೀತಿಯಲ್ಲಿ, ದಲಿತರನ್ನು ಸಮಾನರು ಎಂದು ಸಮಾಜ ಒಪ್ಪಿಕೊಳ್ಳಬೇಕಾದರೆ ತಮ್ಮದಾದ ನಂಬಿಕೆ ಆಚರಣೆಗಳನ್ನೆಲ್ಲ ತೊರೆದು, ಇನ್ನೊಂದು ಜಾತಿಯ ಸಂಸ್ಕೃತಿಯನ್ನು, ಆಚರಣೆಗಳನ್ನು ಒಪ್ಪಿಕೊಳ್ಳಬೇಕು ಎನ್ನುವಂತಹ ದಾರುಣವಾದ ವಾಸ್ತವವನ್ನು ಇದು ಬೆಳಕಿಗೆ ತರುತ್ತದೆ.

ಇದು ಪರೋಕ್ಷವಾಗಿ ಅಸ್ಪಶ್ಯತೆಯ ಭಾಗವೇ ಅಲ್ಲವೇ? ದಲಿತರನ್ನು ಅವರ ನಂಬಿಕೆ, ಆಚರಣೆ, ಸಂಸ್ಕೃತಿಯ ಜೊತೆಗೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಸರಕಾರವೇ ಮತಾಂತರಗೊಳಿಸಿ ದೇವಸ್ಥಾನದ ಅರ್ಚಕರಾಗಿಸಲು ಹೊರಟಿದೆ. ಇದು ಪರೋಕ್ಷವಾಗಿ ಬಹು ಸಂಸ್ಕೃತಿಯನ್ನು ನಾಶಗೊಳಿಸುವ ಭಾಗವೇ ಅಲ್ಲವೇ? ದಲಿತರು ತಮ್ಮ ಸಂಸ್ಕೃತಿ, ಆಚರಣೆಗಳನ್ನು ಬಿಟ್ಟು ವೈದಿಕರನ್ನು ಹಿಂಬಾಲಿಸಬೇಕಾಗುತ್ತದೆ. ಮುಖ್ಯವಾಗಿ ಅವರು ತಮ್ಮ ಆಹಾರ ಸಂಸ್ಕೃತಿಯನ್ನೇ ತೊರೆಯಬೇಕಾಗುತ್ತದೆ. ವೇದ ಮಂತ್ರಗಳನ್ನು ಕಲಿತರೂ ಅವರು ದಲಿತ ಅರ್ಚಕರಾಗುತ್ತಾರೆಯೇ ಹೊರತು, ಬ್ರಾಹ್ಮಣರ ಉನ್ನತ ಜಾತಿಯ ಎತ್ತರವನ್ನು ಏರುವುದು ‘ಹಿಂದೂ’ ಎನ್ನುವ ವರ್ಣ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ತನ್ನದಲ್ಲದ ನಂಬಿಕೆ ಆಚರಣೆಗಳನ್ನು ಆಚರಿಸುತ್ತ, ತನ್ನತನವನ್ನು ಕಳೆದುಕೊಂಡ ಅವರನ್ನು ಬ್ರಾಹ್ಮಣರು ಅಥವಾ ಇತರ ಜಾತಿಯ ಜನರು ತಮ್ಮವರೆಂದು ಸ್ವೀಕರಿಸುವುದು ಅಸಾಧ್ಯದ ಮಾತು. ಒಟ್ಟಿನಲ್ಲಿ ನಿಮ್ಮಿಡನಿದ್ದೂ ನಿಮ್ಮಂತಾಗದೆ ಎನ್ನುವ ಸ್ಥಿತಿಯಲ್ಲಿ ದಲಿತ ಅರ್ಚಕರು ಕಾರ್ಯನಿರ್ವಹಿಸಬೇಕಾಗುತ್ತದೆ. ‘ಬ್ರಾಹ್ಮಣ ಧರ್ಮ’ವನ್ನು ಹಿಂದೂ ಧರ್ಮವೆಂದು ಭಾವಿಸಿ ಸರಕಾರ ನೀಡಿರುವ ಆದೇಶದ ಮಿತಿಗಳು ಇವು.

ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ದಲಿತರಿಗೆ ಅರ್ಚಕ ಹುದ್ದೆಯ ತರಬೇತಿ ಅಂದರೆ ವೈದಿಕ ಆಚರಣೆಗಳನ್ನು ತಿಳಿಸಿಕೊಟ್ಟವರು ವೈದಿಕರೇ ಆಗಿದ್ದಾರೆ. ಅಂದರೆ ಅರ್ಚಕರಾಗಿರುವವರು ಯಾರನ್ನು ಮುಟ್ಟಬಾರದು, ಏನನ್ನು ತಿನ್ನಬಾರದು ಎನ್ನುವುದನ್ನೆಲ್ಲ ತರಬೇತಿಯ ಭಾಗವಾಗಿಯೇ ಕಲಿಸಿಕೊಡುತ್ತಾರೆ. ಇಂತಹ ಅರ್ಚಕರು ಸಮಾಜಕ್ಕೆ ಹೆದರಿ ಇತರ ದಲಿತರನ್ನು ಹತ್ತಿರಕ್ಕೆ ಸೇರಿಸುವ ಸಾಧ್ಯತೆಗಳು ತೀರಾ ಕಡಿಮೆ. ಮುಂದಿನ ದಿನಗಳಲ್ಲಿ ಇವರು ತಮ್ಮ ಮನೆಯಲ್ಲಿ ಮಾಂಸಾಹಾರವನ್ನು ಸಂಪೂರ್ಣ ನಿಲ್ಲಿಸಬೇಕಾಗಬಹುದು.

ಜೊತೆಗೆ ತಮ್ಮೆಂದಿಗೆ ತಮ್ಮ ಪತ್ನಿಯರೂ ಮಾಂಸಾಹಾರ ಸೇವಿಸದಂತೆ ತಡೆಯಬಹುದು. ವೈದಿಕ ಚಿಂತನೆಗಳು ಆಳದಲ್ಲಿ ಜಾತೀಯತೆಯನ್ನೇ ಬೋಧಿಸುತ್ತವೆ. ಆದುದರಿಂದ, ಜಾತೀಯತೆಯನ್ನು ಈ ದಲಿತ ಅರ್ಚಕರೂ ಪಾಲಿಸುವುದು ಅನಿವಾರ್ಯವಾಗಬಹುದು. ಅಂದರೆ ಇತರರ ಜೊತೆಗೆ ಅಂತರವನ್ನು ಕಾಯ್ದುಕೊಳ್ಳುವುದು ಈ ನವ ದಲಿತ ಅರ್ಚಕರಿಗೆ ಅನಿವಾರ್ಯವಾಗಬಹುದು. ಮುಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳನ್ನು ಹಂತಹಂತವಾಗಿ ಕಡಿದುಕೊಳ್ಳುತ್ತಾ ಈ ದಲಿತ ಅರ್ಚಕರೇ ದಲಿತರೊಳಗಿನ ಒಂದು ಜಾತಿಯಾಗಿ ಪರಿವರ್ತನೆಗೊಂಡರೆ ಅಚ್ಚರಿಯೇನಿಲ್ಲ.

ಇಂದಿನ ದಿನಗಳಲ್ಲಿ ಬ್ರಾಹ್ಮಣ ಅರ್ಚಕರ ಮಕ್ಕಳೆಲ್ಲ ಐಟಿ ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಲಕ್ಷಗಟ್ಟಲೆ ಸಂಪಾದಿಸುತ್ತಿರುವಾಗ, ಅಮೆರಿಕ ಲಂಡನ್ ಎಂದು ಜೀವನ ಮಾಡುತ್ತಿರುವಾಗ, ಅವರು ಎಸೆದ ಈ ಹುದ್ದೆಯನ್ನು ದಲಿತರ ಕೊರಳಿಗೆ ಕಟ್ಟುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ವೈದಿಕ ಚಿಂತನೆಗಳು ದಲಿತರನ್ನು ಇನ್ನಷ್ಟು ಕೀಳರಿಮೆಗೆ ತಳ್ಳುವ ಸಾಧ್ಯತೆಗಳಿವೆ. ದಲಿತರು ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆಗಳನ್ನು ನೀಡಬೇಕು. ಕಂಪ್ಯೂಟರ್ ಕಲಿತು ಐಟಿ ಬಿಟಿ ಕಂಪೆನಿಗಳಲ್ಲಿ ಉತ್ತಮ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ಆರ್ಥಿಕವಾಗಿ ಮೇಲ್ಜಾತಿಗೆ ಸರಿಗಟ್ಟಬೇಕು. ಇದಕ್ಕೆ ಸರಕಾರ ನೆರವಾಗಬೇಕು. ಆಗ ಮಾತ್ರ ದಲಿತರ ಬಿಡುಗಡೆ ಸಾಧ್ಯ. ಇದು ಅಂಬೇಡ್ಕರ್ ಅವರ ನಿಲುವೂ ಆಗಿತ್ತು. ಒಟ್ಟಿನಲ್ಲಿ ಒಂದು ಪ್ರಯೋಗವಾಗಿ, ದಲಿತರ ಅರ್ಚಕರ ನೇಮಕಾತಿಯನ್ನು ನಾವು ಸ್ವಾಗತಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News