ನಾವು ಮಾತನಾಡುವ ಪ್ರಧಾನಿಯನ್ನು ನೀಡಿದ್ದೇವೆ: ಅಮಿತ್ ಶಾ

Update: 2017-10-10 17:31 GMT

ಹೊಸದಿಲ್ಲಿ, ಅ. 10: ಬಿಜೆಪಿ ತನ್ನ ಆಡಳಿತದಲ್ಲಿ ಏನು ಮಾಡಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂದಿದ್ದಾರೆ.

ಗುಜರಾತ್‌ನ ಅಭಿವೃದ್ಧಿ ಬಗ್ಗೆ ವ್ಯಂಗ್ಯವಾಡಿರುವ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಮಿತ್ ಶಾ, ರಾಹುಲ್ ಗಾಂಧಿ ಕುಟುಂಬದ ಮೂರು ತಲೆಮಾರು ಅಮೇಥಿಯಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಅವರು ಗುಜರಾತ್‌ನ ಅಭಿವೃದ್ಧಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಅವರಲ್ಲಿ ನಾನು ಕೇಳುತ್ತೇನೆ, ಅವರ ಕುಟುಂಬದ ಮೂರು ತಲೆಮಾರು ಅಮೇಥಿಗೆ ಏನು ನೀಡಿದೆ ಎಂದು ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಅಮಿತ್ ಶಾ ಪ್ರಶ್ನಿಸಿದರು.

ನೀವು ಅಮೇಥಿಯಲ್ಲಿ ಬಿಜೆಪಿ ಮೂರು ವರ್ಷದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಕೇಳಿದ್ದೀರಿ. ಆದರೆ, ಅಲ್ಲಿನ ಜನರು ನಿಮ್ಮ ಕುಟುಂಬದ ಮೂರು ತಲೆಮಾರು ಮಾಡಿದ ಕೆಲಸದ ಬಗ್ಗೆ ಕೇಳುತ್ತಿದೆ ಎಂದು ಅಮಿತ್ ಶಾ ಹೇಳಿದರು.

ನೀವು 60 ವರ್ಷಗಳಿಂದ ನಿಮ್ಮ ಕುಟುಂಬವನ್ನು ನಂಬಿದ್ದೀರಿ. ಈಗ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ನಂಬಿದ್ದೀರಿ. ಈಗ ವಿಶ್ವಾಸದ್ರೋಹ ಉಂಟಾದ ಭಾವನೆ ನಿಮಗೆ ಬರಬಾರದು ಎಂದು ಅಮಿತ್ ಶಾ ಹೇಳಿದರು.

ಎರಡು ಮಾದರಿಯ ಅಭಿವೃದ್ಧಿ ಇದೆ. ಒಂದು ನೆಹರೂ ಮಾದರಿ. ಇನ್ನೊಂದು ಮೋದಿ ಮಾದರಿ. ಕಾಂಗ್ರೆಸ್ 70 ವರ್ಷಗಳ ಕಾಲ ಆಡಳಿತ ನಡೆಸಿದೆ. ಇಲ್ಲಿನ ದೀರ್ಘಾವದಿ ಸಂಸದನಾಗಿದ್ದ ನಿಮಗೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಇಲ್ಲಿ ಯಾಕೆ ಜಿಲ್ಲಾಧಿಕಾರಿ ಕಚೇರಿ, ಕ್ಷಯರೋಗದ ಆಸ್ಪತ್ರೆ, ಆಕಾಶವಾಣಿಯ ಎಫ್.ಎಂ ಇಲ್ಲ ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News