×
Ad

ಮಡಿಕೇರಿ: ಆಮದು ಕಾಳುಮೆಣಸಿನ ವಿರುದ್ಧ ಟ್ರ್ಯಾಕ್ಟರ್ ಜಾಥಾ

Update: 2017-10-10 23:51 IST

ಮಡಿಕೇರಿ, ಅ.10: ವಿಯೆಟ್ನಾಂ ಕಾಳು ಮೆಣಸು ಆಮದನ್ನು ತಕ್ಷಣ ಸ್ಥಗಿತಗೊಳಿಸುವ ಮೂಲಕ ಕೊಡಗಿನ ಬೆಳೆಗಾರರ ಹಿತರಕ್ಷಣೆಗೆ ಸರಕಾರಗಳು ಮುಂದಾಗಬೇಕು. ಕಲಬೆರಕೆ ಕಾಳುಮೆಣಸು ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಗೋಣಿಕೊಪ್ಪಲಿನಿಂದ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಟ್ರ್ಯಾಕ್ಟರ್ ಜಾಥಾ ನಡೆಸಿತು.

ಜಿಲ್ಲಾ ರೈ ಸಂಘ ಹಾಗೂ ಹಸಿರು ಸೇನೆಯ ಸಂಯುಕ್ತಾಶ್ರಯದಲ್ಲಿ ಗೋಣಿಕೊಪ್ಪ ಲಿನ ಎಪಿಎಂಸಿ ಆವರಣದಿಂದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಆರಂಭಗೊಂಡ ಟ್ರ್ಯಾಕ್ಟರ್ ಜಾಥಾಕ್ಕೆ ಒಲಿಂಪಿಯನ್ ಅಶ್ವಿನಿ ನಾಚಪ್ಪ ಚಾಲನೆ ನೀಡಿದರು.
ಈ ಸಂದರ್ಭ ಅಶ್ವಿನಿ ನಾಚಪ್ಪಮಾತನಾಡಿ, ಜಿಲ್ಲೆಯ ರೈತರು ಒಂದಾದರೆ ಸಂಕಷ್ಟಗಳಿಗೆ ಪರಿಹಾರ ಸಾಧ್ಯ. ಪ್ರತಿಯೊಬ್ಬ ರೈತರು ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಅನ್ಯಾಯ ತಡೆಯಲು ಸಾಧ್ಯವೆಂದರು.

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ವರ್ಷವಿಡೀ ಶ್ರಮವಹಿಸಿ ಮೆಣಸು ಬೆಳೆಯುವ ಇಲ್ಲಿನ ಬೆಳೆಗಾರರಿಗೆ ಆಮದಾಗುತ್ತಿರುವ ವಿಯೆಟ್ನಾಂ ಕಾಳುಮೆಣಸಿನಿಂದ ಸಮಸ್ಯೆ ಉಂಟಾಗಿದೆ. ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡಿಕೊಡುವ ಮೂಲಕ ಸಂಕಷ್ಟವನ್ನು ಬಗೆಹರಿಸಲು ಪ್ರಯತ್ನಿಸಲಾಗುವುದೆಂದರು.

ಮಡಿಕೇರಿಯವರೆಗೆ ಟ್ರ್ಯಾಕ್ಟರ್‌ಗಳ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕಚೇರಿಯ ಬಳಿ ಜಾಥಾವನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭ ರೈತ ಸಂಘದ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಗೆ ಸಲ್ಲಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಕೊಡಗು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಖಜಾಂಚಿ ಚೋನಿರ ಕೆ.ಸತ್ಯ, ಸಂಚಾಲಕ ಚಿಮ್ಮಂಗಡ ಗಣೇಶ್, ಮುಖಂಡರಾ ಬಾಚಮಾಡ ಭವಿ, ಮಚ್ಚಾಮಾಡ ರಂಜಿ, ಹ್ಯಾರಿ ಸೋಮೇಶ್, ಸುನೀಲ್ ಬೋಪಣ್ಣ, ಆದೇಂಗಡ ಅಶೋಕ್, ಪುಚ್ಚಿಮಾಡ ಟಿ. ಪೂಣಚ್ಚ, ಧನು ಪೂಣಚ್ಚ, ಅಳಮೇಂಗಡ ಬೋಸ್ ಮಂದಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News