ಮಡಿಕೇರಿ: ಜಿಪಂ ಸಾಮಾನ್ಯ ಸಭೆ
ಮಡಿಕೇರಿ, ಅ.10: ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಯೆಟ್ನಾಂ ಆಮದು ಕಾಳು ಮೆಣಸಿನ ಪ್ರಕರಣ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯರ ಒತ್ತಡಕ್ಕೆ ಮಣಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಪ್ರಕರಣದ ಕುರಿತು ನಡೆಯುತ್ತಿರುವ ಎಸಿಬಿ ತನಿಖೆೆಗೆ ಜಿಪಂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದ್ದಾರೆ.
ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಎ.ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಪ್ರಥ್ಯು, ಗೋಣಿಕೊಪ್ಪಎಪಿಎಂಸಿಯನ್ನು ಸೂಪರ್ ಸೀಡ್ ಮಾಡಬೇಕೆಂದು ಒತ್ತಾಯಿಸಿದರು. ಕಾಳುಮೆಣಸು ಆಮದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ನಿರ್ಣಯ ಕೈಗೊಳ್ಳದಿದ್ದಲ್ಲಿ ಬಾವಿಗಿಳಿದು ಧರಣಿ ಕೂರುವ ಎಚ್ಚರಿಕೆ ನೀಡಿದರು. ಇವರಿಗೆ ಕಾಂಗ್ರೆಸ್‌ನ ಸರ್ವ ಸದಸ್ಯರು ಬೆಂಬಲವಾಗಿ ನಿಂತರು.
ಶಿವು ಮಾದಪ್ಪ ಮಾತನಾಡಿ, ಡಾ.ಕಸ್ತೂರಿರಂಗನ್ ವರದಿ, ಮಾಧವ ಗಾಡ್ಗಿಲ್ ವರದಿಯಂತೆ ಆಮದು ಕಾಳುಮೆಣಸಿನ ವ್ಯವಹಾರ ಕೂಡ ಕೊಡಗಿಗೆ ಮಾರಕವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಳುಮೆಣಸು ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಬೆರೆಸುತ್ತಿದೆ ಎಂದು ಬಿಜೆಪಿ ಸದಸ್ಯರು ಟೀಕಿಸಿದರು. ಚರ್ಚೆ ತೀವ್ರಗೊಂಡಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಬಿ.ಎ.ಹರೀಶ್, ಈಗಾಗಲೆ ತನಿಖೆ ಪ್ರಗತಿಯಲ್ಲಿದ್ದು, ಸಿಐಡಿ ತನಿಖೆೆಗೆ ಜಿಪಂನಿಂದ ನಿಣಯರ್ ಕೈಗೊಳ್ಳಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು. ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ತನಿಖೆಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿ ಬಾವಿಗಿಳಿದರು. ನಿರ್ಣಯ ಪ್ರಕಟಿಸುವಲ್ಲಿಯವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟುಹಿಡಿದರು.
ತನಿಖೆಗೆ ಬೆಂಬಲ: ಕಾಳುಮೆಣಸು ಪ್ರಕರಣದ ಬಗ್ಗೆ ಎಸ್ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಈಗಾಗಲೆ ಆರಂಭಗೊಂಡಿರುವ ಎಸಿಬಿ ತನಿಖೆಗೆ ಜಿಲ್ಲಾ ಪಂಚಾಯತ್ ಸಂಪೂರ್ಣ ಬೆಂಬಲ ನೀಡುವ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಅಧ್ಯಕ್ಷ ಹರೀಶ್‌ಘೋಷಿಸಿದರು. ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.
ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಸರಕಾರದ ಸಂಕಲ್ಪವಾಗಿದೆ. ಎಲ್ಲ ಭಾಗಗಳಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದು ನಾಪೊಕ್ಲು ವ್ಯಾಪ್ತಿಗೆ ಮಾತ್ರ ಸೀಮಿತವಾಗಿಲ್ಲ.
-ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ,ಜಿಲ್ಲಾಧಿಕಾರಿ