×
Ad

ಪ್ರತ್ಯೇಕ ಪ್ರಕರಣ: 30 ಮಂದಿ ಬಂಧನ

Update: 2017-10-11 19:36 IST

ಬೆಂಗಳೂರು, ಅ.11: ಕಳವು ಸೇರಿದಂತೆ 49 ಪ್ರಕರಣಗಳಿಗೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಿ 1.24 ಕೋಟಿ ಬೆಲೆಬಾಳುವ ಚಿನ್ನ, ಬೆಳ್ಳಿ, ಬೈಕ್, ರಕ್ತಚಂದನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ನಗರದ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ನಗರದ ದಕ್ಷಿಣ ವಿಭಾಗದ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ, ಆರೋಪಿಗಳಿಂದ 1.347 ಕೆಜಿ ಚಿನ್ನಾಭರಣ, 25 ಕೆಜಿ ಬೆಳ್ಳಿ ವಸ್ತುಗಳು, 14 ಬೈಕ್‌ಗಳು ಹಾಗೂ 429 ಕೆಜಿ ರಕ್ತಚಂದನ ಸೇರಿ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಜೆಪಿ ನಗರ: ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿ 14 ಪ್ರಕರಣಗಳನ್ನು ಪತ್ತೆ ಹಚ್ಚಿ 27 ಮೊಬೈಲ್, ಲ್ಯಾಪ್‌ಟಾಪ್, 3 ಬೈಕ್‌ಗಳು, ಮಾರಕಾಸ್ತ್ರಗಳು ವಶಪಡಿಸಿಕೊಳ್ಳುವಲ್ಲಿ ಜೆಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿವಿ ಪುರಂ: ವಾಹನ ಹಾಗೂ ಕ್ಯಾಂಟರ್‌ಗಳು, ರಕ್ತಚಂದನವನ್ನು ಕಳ್ಳತನ ಮಾಡಿ ಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ 12.49 ಲಕ್ಷ ರೂ. ಬೆಲೆಬಾಳುವ ಬೈಕ್, 3 ಕ್ಯಾಂಟರ್, 8.58 ಲಕ್ಷ ಬೆಲೆಬಾಳುವ 429 ಕೆಜಿ ರಕ್ತಚಂದನ, 60 ಸಾವಿರ ಮೌಲ್ಯದ ಬೈಕ್‌ಗಳನ್ನು ವಿವಿ ಪುರಂ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಮಾರಸ್ವಾಮಿ ಲೇಔಟ್: ಮನೆಗಳ್ಳತನ, ರಾಬರಿ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ 10 ಜನರನ್ನು ಕುಮಾರಸ್ವಾಮಿ ಠಾಣೆ ಪೊಲೀಸರು ಬಂಧಿಸಿ 7.5 ಕೆಜಿ ಬೆಳ್ಳಿ ವಸ್ತುಗಳು, 3 ಮೊಬೈಲ್‌ಗಳು, ವಾಚ್, ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಣನಕುಂಟೆ: ಕನ್ನಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೋಣನಕುಂಟೆ ಪೊಲೀಸರು ಬಂಧಿಸಿ 4 ಲಕ್ಷ ರೂ.ಬೆಲೆಬಾಳುವ 152 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.

ಹನುಮಂತ ನಗರ: ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ 5 ಪ್ರಕರಣಗಳನ್ನು ಪತ್ತೆ ಹಚ್ಚಿ 7.70ಲಕ್ಷ ರೂ. ಬೆಲೆಬಾಳುವ 275 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸಿಕೆ ಅಚ್ಚುಕಟ್ಟು: ಮೋಜಿನ ಜೀವನಕ್ಕಾಗಿ ಮನೆಗಳ್ಳತನ, ಯುಪಿಎಸ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಪೊಲೀಸರು ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 5.40ಲಕ್ಷ ರೂ. ಬೆಲೆಬಾಳುವ 180 ಗ್ರಾಂ ಚಿನ್ನಾಭರಣ, 250 ಬೆಳ್ಳಿ ವಸ್ತುಗಳು ಹಾಗೂ 3 ಎಕ್ಸೆಲ್ ಕಂಪೆನಿಯ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News