×
Ad

ಕಾರ್ಯಸ್ಥಳದಲ್ಲಿ ಮಾನಸಿಕ ಆರೋಗ್ಯ ಬಹುಮುಖ್ಯ: ಜೈ ಶಂಕರ್

Update: 2017-10-11 20:55 IST

ಬೆಂಗಳೂರು, ಅ. 11: ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಒತ್ತಡದ ಹಿನ್ನೆಲೆಯಲ್ಲಿ ಮನುಷ್ಯ ತಾಳ್ಮೆ ಕಳೆದುಕೊಂಡು ಖಿನ್ನತೆಗೊಳಗಾಗುತ್ತಿದ್ದಾನೆ. ಇಂತಹವರಿಗೆ ಸೂಕ್ತ ಹಾರೈಕೆ ಮಾಡಿ ಮುಖ್ಯವಾಹಿನಿಗೆ ತರುವುದು ಸಮುದಾಯದ ಕರ್ತವ್ಯ ಎಂದು ನ್ಯಾಯಾಧೀಶ ಹಾಗೂ ಬೆಂ.ನಗರ ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್ ಸಲಹೆ ಮಾಡಿದ್ದಾರೆ.

ಇತ್ತೀಚೆಗೆ ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಸಮಿತಿ ಹಾಗೂ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ಅಧಿಕಾರಿ ಮತ್ತು ಸಿಬ್ಬಂದಿ ಒತ್ತಡದಿಂದ ಹೊರಬಂದು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಹದ್ಯೋಗಿಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಬೇಕು. ಆಗ ಒತ್ತಡವನ್ನು ನಿರ್ವಹಿಸಲು ಸಾಧ್ಯ ಎಂದ ಅವರು, ಮಾನಸಿಕ ಅಸ್ವಸ್ಥತೆಯು ಗುಣಪಡಿಸುವ ಕಾಯಿಲೆಯಾಗಿದ್ದು, ಉತ್ತಮ ಮತ್ತು ಪರಿಣತ ವೈದ್ಯರ ಸಹಕಾರದಿಂದ ಈ ಕಾಯಿಲೆ ಹೋಗಲಾಡಿಸಬಹುದು ಎಂದು ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ರತನ್ ಮಾತನಾಡಿ, ಸಮಾಜದಲ್ಲಿ ಮಾನಸಿಕ ಪದವನ್ನು ಉಪಯೋಗಿಸುವುದೇ ತಪ್ಪಾಗಿದ್ದು, ಇದರ ಬಳಕೆಯನ್ನು ಕೈಬಿಡಬೇಕು. ಈ ಕಾಯಿಲೆ ಇರುವವರಿಗೆ ಔಷಧಿ ನೀಡುವುದರ ಜೊತೆಗೆ ಒಳ್ಳೆಯ ಸಂಗಾತಿಗಳೊಂದಿಗೆ ಬೆರೆಯುವುದು, ಮಾತನಾಡುವುದು ಮುಖ್ಯ ಎಂದರು.

ನಾವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮನಸ್ಥಿತಿ ಬೇಕಾಗುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸದೆ ಜನರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಮುಕ್ತವಾಗಿ ಮನಸ್ಸು ತೆರೆದುಕೊಳ್ಳುತ್ತದೆ ಎಂದು ವಿವರಿಸಿದರು.

ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ಮಾತನಾಡಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾನಸಿಕ ಅನಾರೋಗ್ಯವನ್ನು ಪರಿಹರಿಸಲು ಅಸ್ವಸ್ಥರನ್ನು ಏಕಾಂಗಿಯಾಗಿ ಬಿಡದೆ ಅವರಿಗೆ ತಾಳ್ಮೆಯಿಂದ ಈ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಸೋಮಶೇಖರ್ ಮಾತನಾಡಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 4,300 ಕೈದಿಗಳಿದ್ದು, ಅವರು ವಿವಿಧ ರೀತಿ ಖಿನ್ನತೆಗೊಳಗಾಗಿದ್ದಾರೆ. ಅವರನ್ನು ನೋಡಿಕೊಳ್ಳುತ್ತಿರುವ ಜೈಲಿನ ಸಿಬ್ಬಂದಿಯವರಿಗೆ ಒತ್ತಡ ಹೆಚ್ಚಾಗುತ್ತಿದ್ದು, ಅವರೂ ಖಿನ್ನತೆಗೊಳಗಾಗುತ್ತಿದ್ದಾರೆ. ಸಿಬ್ಬಂದಿಯವರಿಗೆ ಕೆಲಸ ನಿರ್ವಹಿಸಲು ಸೂಕ್ತ ಪರಿಸರವನ್ನು ನಿರ್ಮಿಸುವುದರ ಜೊತೆಗೆ ಉತ್ಸುಕತೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ ಸಹಕಾರ ನೀಡಲಾಗುತ್ತಿದೆ ಎಂದರು.

ಮಾನಸಿಕ ಆರೋಗ್ಯ ಭಾಗದ ಉಪನಿರ್ದೇಶಕ ಡಾ.ರಜನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಜೈಲು ವಾಸಿಗಳಿಗೆ ಶೇ.80ರಷ್ಟು ಒತ್ತಡವಿದ್ದರೆ, ಸಿಬ್ಬಂದಿಗೆ ಶೇ.60ರಷ್ಟು ಒತ್ತಡವಿರುತ್ತದೆ. ಹೀಗಾಗಿ ಅಂತಹ ಸಿಬ್ಬಂದಿಗೆ ಸೂಕ್ತ ಆಪ್ತ ಸಮಾಲೋಚನೆ ಹಾಗೂ ಪರಿವರ್ತನೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.

ಈ ವೇಳೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಂಬಂಧ ವಿಶೇಷವಾದ ಅಂಚೆ ಲಕೆಟೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯರಾದ ರಮೇಶ್ ಬಾಬು, ಅನ್ಸರ್ ಅಹ್ಮದ್, ಪುಷ್ಪರಾಜ್, ಚೇತನ್‌ಕುಮಾರ್, ನಟರಾಜ್, ರಮೇಶ್ ಕುಮಾರ್ ಎಂ. ಚಂದ್ರಶೇಖರ್, ನಿಮ್ಹಾನ್ಸ್ ಪ್ರಾಧ್ಯಾಪಕಿ ಡಾ.ಪ್ರತಿಮಾ ಮೂರ್ತಿ ಹಾಗೂ ಕಾರಾಗೃಹ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News