ವಿಷನ್-2025 ಅನುಷ್ಠಾನ: ಸಲಹೆ, ಅಭಿಪ್ರಾಯ ಸಂಗ್ರಹಣೆ
ಮಂಡ್ಯ, ಅ.12: ವಿಷನ್-2025 ಡಾಕ್ಯುಮೆಂಟ್ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಗುರುವಾರ ತನ್ನ ಕಚೇರಿಯಲ್ಲಿ ಅಧಿಕಾರೇತರ ಸದಸ್ಯರ ಸಭೆ ನಡೆಸಿ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಿಸಿದರು.
ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂಬಂಧ ಅ.27 ರಂದು ಕಾರ್ಯಾಗಾರವೊಂದನ್ನು ನಡೆಸುತ್ತಿದ್ದು, ಪೂರ್ವಭಾವಿಯಾಗಿ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಮಂಜುಶ್ರೀ ಆರಂಭದಲ್ಲಿ ಪ್ರಸ್ತಾಪಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ರೈತರ ಅಭಿವೃದ್ಧಿಗೆ ಪೂರಕವಾಗಿ ರೈತ ಸ್ನೇಹಿ, ಜನ ಸ್ನೇಹಿ, ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಒತ್ತು ನೀಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬಹುದು ಎಂದರು.
ರಿಂಗ್ ರೋಡ್ ಯೋಜನೆ ಅನುಷ್ಠಾನವಾಗಬೇಕು. ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಪ್ರವಾಸಿತಾಣಗಳ ಅಭಿವೃದ್ಧಿಪಡಿಸಬೇಕು. ಕಲಾಮಂದಿರ ಸೇರಿದಂತೆ ಬಯಲು ರಂಗ ಮಂದಿರಗಳು ಸಾಂಸ್ಕೃತಿಕ ಕೇಂದ್ರಗಳ ಸ್ಥಾಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಾಹಿತಿ ಪ್ರೊ.ಎಂ.ಕರಿಮುದ್ದಿನ್ ಸಲಹೆ ಮಾಡಿದರೆ, ಸುಸಜ್ಜಿತ ಕ್ರೀಡಾಂಣಗಳ ನಿರ್ಮಾಣಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್ ಸಲಹೆ ಮಾಡಿದರು. ಕಸವಿಲೇವಾರಿಗೆ ಕ್ರಮವಹಿಸಬೇಕು ಎಂದು ಪರಿಸರ ತಜ್ಞ ಡಾ.ರಾಮಲಿಂಗಯ್ಯ ಹೇಳಿದರು.
ನಗರದ ಅಭಿವೃದ್ಧಿ ಜತೆಗೆ ಗ್ರಾಮಗಳ ಅಭಿವೃದ್ಧಿಗೂ ಗಮನಹರಿಸಬೇಕು. ನಗರ-ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಪಡಿಸಬೇಕು. ಈ ಸಂಬಂಧ ಕಾರ್ಯಾಗಾರದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ನಗರ ಸಾರಿಗೆ ತಜ್ಞ ಎಸ್.ಪಿ.ಮಹೇಂದ್ರ ತಿಳಿಸಿದರು.
ಸಭೆಯಲ್ಲಿ ಡಾ.ಶಂಕರೇಗೌಡ, ಪರಿಸರ ತಜ್ಞ ಶಿವಶಂಕರ್, ಮಾಜಿ ಶಾಸಕ ಎಚ್.ಬಿ.ಚೌಡಯ್ಯ, ಮುಡಾ ಅಧ್ಯಕ್ಷದ ಮುನಾವರ್ ಖಾನ್, ನಗರಸಭೆ ಅಧ್ಯಕ್ಷ ಬೋರೆಗೌಡ, ಡಾ.ಭಾನುಪ್ರಕಾಶ್ ಶರ್ಮ, ಮೀರಾ ಶಿವಲಿಂಗಯ್ಯ, ಜಿಪಂ ಸಿಇಓ ಬಿ.ಶರತ್, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಇತರೆ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರು.