×
Ad

ಇಬ್ಬರು ವಾರ್ಡನ್‌ಗಳ ಅಮಾನತು: ಸಿಇಒ ಆದೇಶ

Update: 2017-10-12 23:53 IST

ಶಿವಮೊಗ್ಗ, ಅ.12: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್‌ಗಳಲ್ಲಿ ಶಿವಮೊಗ್ಗ ತಾಲೂಕಿನ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವಾರ್ಡನ್‌ಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಪಂ ಸಿಇಒ ಡಾ. ಕೆ.ರಾಕೇಶ್‌ಕುಮಾರ್, ಇತ್ತೀಚೆಗೆ ಶಿವಮೊಗ್ಗ ಹಾಗೂ ಸಾಗರ ತಾಲೂಕು ವ್ಯಾಪ್ತಿಗಳಲ್ಲಿ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಅಧೀನದಡಿ ಕಾರ್ಯನಿರ್ವಹಿಸುತ್ತಿದ್ದ ಹಾಸ್ಟೆಲ್‌ಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಲಾಗಿತ್ತು.

ದಾಳಿಯ ವೇಳೆ ಶಿವಮೊಗ್ಗ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಇಬ್ಬರು ವಾರ್ಡನ್‌ಗಳು ಕರ್ತವ್ಯ ಲೋಪ ಎಸಗಿದ್ದು ದೃಢಪಟ್ಟಿದೆ. ಹಾಸ್ಟೆಲ್‌ಗೆ ಆಹಾರ ಪೂರೈಕೆಯ ದಾಖಲಾತಿ ಸಮರ್ಪಕವಾಗಿಡದೆ, ಬಿಲ್ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಮೇಲೆ ದಾಳಿ ನಡೆಸಿದಾಗ ಕಂಡುಬಂದ ಲೋಪದೋಷಗಳ ವರದಿಯನ್ನು ಅಧಿಕಾರಿ ಗಳು ಸಲ್ಲಿಸಿದ್ದಾರೆ. ಈ ವರದಿ ಪರಿಶೀಲನೆ ನಡೆಸಿದ ನಂತರ ಕರ್ತವ್ಯ ಲೋಪ ಎಸಗಿದ ವಾರ್ಡನ್‌ಗಳ ವಿರುದ್ಧ ಕಾನೂನು ರೀತ್ಯ ನಿರ್ದಾ ಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಡಾ. ಕೆ.ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ ಹಾಗೂ ಸಾಗರ ತಾಲೂಕಿನ ಹಾಸ್ಟೆಲ್‌ಗಳ ಮೇಲೆ ಪ್ರತ್ಯೇಕ ಅಧಿಕಾರಿಗಳ ತಂಡ ನೇತೃತ್ವದಲ್ಲಿ ಏಕಕಾಲಕ್ಕೆ ದಿಢೀರ್ ಕಾರ್ಯಾಚರಣೆ ನಡೆಸಿದ್ದು ನಿಜ. ಅತ್ಯಂತ ಗುಪ್ತವಾಗಿ, ವ್ಯವಸ್ಥಿತ ವಾಗಿ ಎರಡೂ ತಾಲೂಕುಗಳ ಹಾಸ್ಟೆಲ್‌ಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಹಲವು ಲೋಪದೋಷಗಳು ಗಮನಕ್ಕೆ ಬಂದಿವೆ. ದಾಳಿಯ ಸಂಪೂರ್ಣ ವರದಿ ಬಂದ ನಂತರವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಿಇಒ ಉತ್ತರಿಸಿದ್ದಾರೆ.

ತಂತ್ರ ರೂಪಿಸಿದ್ದು ಸಿಇಒ: ಹಾಸ್ಟೆಲ್ ಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿ ಲೋಪದೋಷ ಬಹಿರಂಗಪಡಿಸುವಲ್ಲಿ ನೇರ-ನಿರ್ಭೀಡ ಕಾರ್ಯವೈಖರಿ ಮೂಲಕ ಗಮನ ಸೆಳೆದಿರುವ ಜಿಪಂ ಸಿಇಒ ಡಾ. ಕೆ.ರಾಕೇಶ್‌ಕುಮಾರ್ ಪಾತ್ರ ಅತ್ಯಂತ ಗಮನಾರ್ಹವಾದುದಾಗಿದೆ. ಕಳೆದ ಹಲವು ದಿನಗಳ ಹಿಂದಿನಿಂದಲೇ ಅವರು ದಾಳಿಯ ರೂಪುರೇಷೆ ಸಿದ್ಧಪಡಿಸಿದ್ದರು. ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್‌ವೊಂದನ್ನು ರೂಪಿಸಿದ್ದರು. ದಾಳಿಯ ವಿಷಯ ಸೋರಿಕೆಯಾಗದಂತೆ ಸಾಕಷ್ಟು ಎಚ್ಚರ ವಹಿಸಿದ್ದರು. ದಾಳಿಗೆ ನಿಯೋಜಿಸಲಾಗಿದ್ದ ಅಧಿಕಾರಿ-ಸಿಬ್ಬಂದಿಗೂ ಕಡೆ ಕ್ಷಣದವರೆಗೂ ದಾಳಿಯ ಮಾಹಿತಿ ಗೊತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News