ಪಿ. ಸಾಯಿನಾಥ್ ಅವರು ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಆಯ್ಕೆ

Update: 2017-10-13 07:03 GMT

ಚಿತ್ರದುರ್ಗ, ಅ. 13 - ಚಿತ್ರದುರ್ಗ ಶ್ರೀ ಮುರುಘಾಮಠದಿಂದ ಪ್ರತಿವರ್ಷ ಕೊಡಮಾಡುತ್ತಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು 2016ನೇ ಸಾಲಿಗೆ ಹೆಸರಾಂತ ಪತ್ರಕರ್ತ, ಗ್ರಾಮೀಣ ಅಭಿವೃದ್ಧಿ ಸಾಹಿತ್ಯ ಹರಿಕಾರ, ದಲಿತಪರ ಚಿಂತಕ, ಸಮಾಜ ಸೇವಾಕರ್ತ, ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ‘ದಿ ಹಿಂದೂ’ ದಿನಪತ್ರಿಕೆಯ ಗ್ರಾಮೀಣ ವಿಷಯ ಆವೃತ್ತಿಯ ಮಾಜಿ ಸಂಪಾದಕ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕ  ಪಿ. ಸಾಯಿನಾಥ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

ಶ್ರೀಮಠದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದ ಶ್ರೀಗಳು, ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ತತ್ತ್ವಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರಿಗೆ ಹಾಗೂ ಶರಣರ ಆದರ್ಶಗಳನ್ನಾಧರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನ ಮಾಡುವ ಸಲುವಾಗಿ ಶ್ರೀ ಮುರುಘಾಮಠ ಸ್ಥಾಪಿಸಿರುವ ಪ್ರಶಸ್ತಿ ಇದಾಗಿದ್ದು, ಐದು ಲಕ್ಷ ರೂಪಾಯಿಗಳ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದರು.

1957ರಲ್ಲಿ ಚೆನ್ನೈನ ತೆಲುಗುಭಾಷಾ ಕುಟುಂಬದಲ್ಲಿ ಜನಿಸಿದ ಶ್ರೀ ಸಾಯಿನಾಥ್‌ರವರು ಸ್ವಾತಂತ್ರ್ಯ ಹೋರಾಟಗಾರರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಧುರೀಣರೂ ಮತ್ತು ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿಯವರ ಮೊಮ್ಮಗ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಪದವಿ ಪಡೆದ ಇವರು ಎಡ್ಮಂಟನ್‌ನ ಅಲ್ಬೆರ್ಟಾ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪದವಿ ಗಳಿಸಿದರು (2011). 1980ರಲ್ಲಿ ಯುಎನ್‌ಐ ವರದಿಗಾರರಾಗಿ ವೃತ್ತಿ ಆರಂಭಿಸಿದ ಅವರು ಪತ್ರಿಕೋದ್ಯಮ ವಲಯದಲ್ಲಿ ಅತ್ಯಂತ ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಗಳನ್ನು ನಿರ್ವಹಿಸಿದವರು.

‘ದಿ ಹಿಂದೂ’ ಪತ್ರಿಕೆ ಓದುಗರು ಮೊದಲಾಗಿ ವಿಶ್ವವಿದ್ಯಾನಿಲಯಗಳ ಅರ್ಥಶಾಸ್ತ್ರ ಪ್ರಾಧ್ಯಾಪಕರು, ಭಾರತೀಯ ಸಂವಿಧಾನ ಆಶಯದ ಅಭಿವೃದ್ಧಿ ಕಾರ್ಯಕ್ರಮಗಳ ಚಿಂತಕರು, ಯೋಜನಾ ಆಯೋಗದಂತಹ ಸಂಸ್ಥೆಗಳನ್ನೊಳಗೊಂಡಂತೆ ಹಲವು ಹತ್ತು ಯೋಜನಾ ಸಂಸ್ಥೆಗಳು, ಕೃಷಿ ತಜ್ಞರು. ಗ್ರಾಮೀಣ ಕಸುಬು-ಕೈಗಾರಿಕೆಗಳ ಮಹತ್ವ ಕುರಿತಂತೆ ಮತ್ತು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೃಷಿ ಪ್ರಧಾನ ಕ್ಷೇತ್ರ ಹಳ್ಳಿಗಳ ಪ್ರಗತಿಯ ಪಾತ್ರ ಕುರಿತಂತೆ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಬರೆದ ವರದಿ, ಲೇಖನಗಳು ನಮ್ಮ ಆರ್ಥಿಕ ನೀತಿಯ ದಿಕ್ಕನ್ನು ಸಾಮಾಜಿಕ ನ್ಯಾಯದತ್ತ ತಿರುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ಇಂದಿನ ‘ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’, ಹಿಂದಿನ ದಶಕಗಳಲ್ಲಿ ಕ್ರಾಂತಿಕಾರಿಯಾಗಿ ಜಾರಿಕೊಂಡ ‘ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ’, ಮೊದಲಾದ ಯೋಜನೆಗಳ ಕಾರ್ಯಾನುಷ್ಠಾನಗಳ ಮೌಲ್ಯಮಾಪನ ವರದಿಗಳು ವಸ್ತುನಿಷ್ಠತೆಗೆ ಹೆಸರಾದಂತಹುಗಳು. ಇಂದಿಗೂ ಕೂಡ ಚೆನ್ನೈನ ‘ಏಶಿಯನ್ ಕಾಲೇಜ್ ಆಪ್ ಜರ್ನಲಿಸಂ’, ಮುಂಬೈನ ‘ಸೋಫಿಯಾ ಪಾಲಿಟೆಕ್ನಿಕ್’, ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯ, ಹಾರ್ವರ್ಡ್ ವಿಶ್ವವಿದ್ಯಾನಿಲಯ ಮೊದಲಾದವುಗಳಲ್ಲಿ ಪತ್ರಿಕೋದ್ಯಮ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶ್ರೀಯುತರ ವರದಿ ವಸ್ತು ವಿಷಯಗಳನ್ನು ಕುರಿತಂತೆಯೇ ಚಿತ್ರೀಕರಿಸಲಾದ ‘A Tribe of His Own –The Journalism of P.Sainath’, ಎನ್ನುವ ಡಾಕ್ಯುಮೆಂಟರಿ ಚಿತ್ರಕ್ಕೆ 14 ಅಂತಾರಾಷ್ಟ್ರೀಯ ಪ್ರಶಸ್ತಿ ಸಂದಿವೆ. ಗ್ರಾಮೀಣ ಜನರ ಬದುಕಿನ ಸ್ಥಿತಿಗತಿಗಳನ್ನು ಕುರಿತಂತೆ, ಮಹಿಳೆಯರ ಸ್ಥಾನಮಾನಗಳನ್ನು ಕುರಿತಂತೆ, ಕೃಷಿ ಕಾರ್ಮಿಕರನ್ನು ಕುರಿತಂತೆ ಖುದ್ದಾಗಿ ಅವರೇ ಸಂದರ್ಶಿಸಿ, ಅವರೊಂದಿಗೆ ತೆಗೆದ ಛಾಯಾಚಿತ್ರಗಳ ಪ್ರದರ್ಶನಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿವೆ. ಅವುಗಳಲ್ಲಿ ಬಹುಮುಖ್ಯವಾದ, ‘Visible work, InvisibleWomen; Women and work in Rural India’, ಎನ್ನುವ ಕೃತಿ ಜಾಗತಿಕ ಮಹತ್ವ ಪಡೆದಿದೆ. ಭಾರತದ ಸಮಗ್ರ ಅಭಿವೃದ್ಧಿ ಯೋಜನೆಗಳ ವೈಫಲ್ಯಗಳನ್ನು ವಸ್ತುನಿಷ್ಟವಾದ, ಯಾವ ತತ್ತ್ವ-ಸಿದ್ಧಾಂತಗಳ ಪೂರ್ವಗ್ರಹಿಕೆಯಿಲ್ಲದೆ ಸಾಕ್ಷಾಧಾರಗಳಿಂದ ಸಾಬೀತುಪಡಿಸುವ ಇವರ ವರದಿಗಳಿಗೆ ಅರ್ಧ ಶತಕದಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಸಂದಿವೆ. ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಕೊಡಮಾಡುವ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದಾಗ, ‘ಸರ್ಕಾರವನ್ನು ವಿಮರ್ಶೆಗೊಳಪಡಿಸುವ ವರದಿಗಾರನಾಗಿ ಅದರ ಗೌರವದ ಹಂಗಿಗೆ ಒಳಗಾಗುವುದು ಬೇಡ’ ಎಂದು ವಿನಮ್ರವಾಗಿ ತಿರಸ್ಕರಿಸಿದ್ದರು.

ಸಾಯಿನಾಥ್‌ ಅವರ ಬದುಕು, ಹೋರಾಟಗಳು 12ನೇ ಶತಮಾನದ ಬಸವಾದಿ ಶರಣರ ಸಂಪೂರ್ಣ ಕ್ರಾಂತಿಯ ನೆಲೆಯನ್ನು ಗುರುತಿಸಿ, ಗೌರವಿಸಿ ಇಂದಿನ ಪ್ರಕ್ಷುಬ್ಧಗಳ ವಿರುದ್ಧ ಚಳವಳಿಯ ಚೈತನ್ಯದ ಸುಳಿಯೆಬ್ಬಿಸಲು ಹೋರಾಡುವ ಹೋರಾಟಗಾರರಿಗೆ ಪ್ರೇರಣೆ ತುಂಬುವ ಆಶಯದಿಂದ ಈ ಪ್ರಶಸ್ತಿಯನ್ನು ಶ್ರೀ ಮುರುಘಾಮಠ ನೀಡುತ್ತಿದೆ.

1997 ರಲ್ಲಿ ಆರಂಭಿಸಿದ ಈ ಪ್ರಶಸ್ತಿಯನ್ನು ಈ ಹಿಂದೆ ಶ್ರೀ ಬೆಲ್ದಾಳ್ ಶರಣರು, ದಿವಂಗತ ಹಿರೇಮಲ್ಲೂರು ಈಶ್ವರನ್, ಡಾ. ಎಚ್. ಸುದರ್ಶನ್, ಸಮಾಜಸೇವಾಕರ್ತ  ಅಣ್ಣಾ ಹಜಾರೆ, ಹೋರಾಟಗಾರ್ತಿ  ಮೇಧಾ ಪಾಟ್ಕರ್, ಬೌದ್ಧಗುರು  ದಲಾಯಿ ಲಾಮಾ, ಕ್ರಾಂತಿ ಕವಿ ಗದ್ದರ್, ಡಾ. ವಂದನಾ ಶಿವ, ನೈಸರ್ಗಿಕ ಕೃಷಿಯ ಹರಿಕಾರ  ಸುಭಾಷ್ ಪಾಳೇಕಾರ್, ಖ್ಯಾತ ಕಲಾವಿದೆ ಹಾಗೂ ಸಮಾಜ ಸೇವಾಕರ್ತೆ  ಶಬಾನಾ ಆಜ್ಮಿ, ಕ್ರಾಂತಿಕಾರಿ ಸಮಾಜ ಸುಧಾರಕ  ಸ್ವಾಮಿ ಅಗ್ನಿವೇಶ್,  ಡಾ. ಕಿರಣ್‌ಬೇಡಿ,  ಪಿ.ಟಿ. ಉಷಾ, ಡಾ. ಎ.ಟಿ. ಆರ್ಯರತ್ನೆ, ಸಮಾಜವಾದಿ ಚಿಂತಕ ಮತ್ತು ಹೋರಾಟಗಾರ ದಿವಂಗತ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ದಕ್ಷ ಪೊಲೀಸ್ ಅಧಿಕಾರಿ ಡಾ. ಶಂಕರ ಮಹಾದೇವ ಬಿದರಿ, ವಿಶ್ವವಿಖ್ಯಾತ ತಂತ್ರಜ್ಞಾನಿ ಮತ್ತು ದಕ್ಷ ಉದ್ಯಮಿಗಳಾದ ಇನ್ಫೋಸಿಸ್ ಸಂಸ್ಥೆಯ  ಎನ್.ಆರ್.ನಾರಾಯಣ ಮೂರ್ತಿ ಮತ್ತು  ಸುಧಾಮೂರ್ತಿ, ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್‌ ಜಾಯ್, ನಾಡೋಜ ಡಾ. ಎಂ.ಎಂ. ಕಲಬುರ್ಗಿ ಮಾಸ್ತರ್ ಇವರುಗಳಿಗೆ ನೀಡಿ ಗೌರವಿಸಲಾಗಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News