ಭಾರೀ ಮಳೆಗೆ ಮೈಸೂರು ನಗರ ತತ್ತರ
ಮೈಸೂರು,ಅ.13: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ಅದೇ ರೀತಿ ಕನಕಗಿರಿ, ವಿನಾಯಕನಗರ ಬಡಾವಣೆಗಳಿಗೂ ಮಳೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ತೊಮದರೆ ಗೀಡಾದರು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಶುಕ್ರವಾರ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಎಲೆತೋಟದ ಬಳಿಯಿರುವ ಕನಕಗಿರಿ ಬಡಾವಣೆಯ ಮನೆಗಳಿಗೆ ಮಳೆ ಬಂದಾಗಲೆಲ್ಲಾ ನೀರು ನುಗಿ ತೊಂದರೆಯಾಗುತ್ತದೆ. ಇದಕ್ಕೆ ಬಡಾವಣೆಯ ಸಮೀಪದಲ್ಲೇ ತಲೆ ಎತ್ತಿರುವ ಖಾಸಗಿ ಬಡಾವಣೆ ಕಾರಣವಾಗಿದೆ. ಖಾಸಗಿ ಬಡಾವಣೆ ನಿರ್ಮಾಣಕ್ಕಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೇ ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿ ಖಾಸಗಿ ಬಡಾವಣೆಗೆ ಹೊಂದಿಕೊಂಡಿರುವ ಕಾಂಪೌಂಡ್ ನ ಗೋಡೆ ಕೆಡವಲು ಮುಂದಾದರು. ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವಸ್ತು ಪ್ರದರ್ಶನದಲ್ಲಿ ಪ್ರತಿಭಟನೆ: ಇನ್ನೂ ದಸರಾ ವಸ್ತುಪ್ರದರ್ಶನದ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಹೀಗಾಗಿ ವಸ್ತುಪ್ರದರ್ಶನದ ಗುತ್ತಿಗೆದಾರರು ಶುಕ್ರವಾರ ವಸ್ತುಪ್ರದರ್ಶನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ವಸ್ತು ಪ್ರದರ್ಶನದ ಅಂಗಡಿ ಮಳಿಗೆಳಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿದ್ದು, ವ್ಯಾಪಾರ ಮಾಡಲು ಹಾಕಿದ್ದ ಅಂಗಡಿ ಶೇಡ್‍ಗಳು ಮಳೆಗೆ ಹಾನಿಗೊಳಗಾಗಿವೆ. ಪ್ರತಿಭಟನೆ ಮಾಡಲು ಮುಂದಾಗಿರುವ ಗುತ್ತಿಗೆದಾರ ದಿನೇಶ್ ಗೆ ಮಳಿಗೆ ಮಾಲಕರು ಬೆಂಬಲ ನೀಡಿದ್ದಾರೆ. ನಮ್ಮ ಸಮಸ್ಯೆ ಪರಿಹಾರವಾಗಬೇಕು. ಇಲ್ಲವಾದರೆ ಇಂದಿನಿಂದ ವಸ್ತುಪ್ರದರ್ಶನ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಮಳೆಯಿಂದಾಗಿ ಲಕ್ಷಾಂತರ ರೂ ಬೆಲೆ ಬಾಳುವ ಆಟೋಪಕರಣಗಳ ಮೋಟಾರ್ ಗಳು ಕೆಟ್ಟು ನಿಂತಿದೆ. ಇನ್ನು ವಸ್ತುಪ್ರದರ್ಶನದ ಆವರಣವೆಲ್ಲ ಕೆಸರಿನಿಂದ ಕೂಡಿದೆ.
ಮೇಯರ್ ನಗರ ಪ್ರದಕ್ಷಿಣೆ: ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಸೇರಿದಂತೆ ಹಲವೆಡೆ ಮಹಾನಗರಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ನಗರ ಪ್ರದಕ್ಷಿಣೆ ಕೈಗೊಂಡರು.
ಎಲ್ಲೆಲ್ಲಿ ಏನೇನು ಅನಾಹುತಗಳು ಸಂಭವಿಸಿವೆ ಎಂಬುದನ್ನು ವೀಕ್ಷಿಸಲು ಸ್ವತ: ಮೇಯರ್ ನಗರ ಪ್ರದಕ್ಷಿಣೆ ಕೈಗೊಂಡಿದ್ದರು. ಪಾಲಿಕೆಯಿಂದ ಹೊರಟ ಮೇಯರ್ ಅವರು ಹಾರ್ಡಿಂಜ್ ಸರ್ಕಲ್, ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಶನ್, ಒಂಟಿಕೊಪ್ಪಲ್ ಪೊಲೀಸ್ ಸ್ಟೇಶನ್, ಪಡುವಾರಹಳ್ಳಿ, ಜೆಪಿ ನಗರ, ಚಂದ್ರಕಲಾ ಹಾಸ್ಪಿಟಲ್ ಜಂಕ್ಷನ್, ವಿದ್ಯಾವರ್ಧಕ ಕಾಲೇಜ್, ಹುಣಸೂರು ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ನ್ಯೂಕಾಂತರಾಜ್ ಅರಸ್ ರಸ್ತೆ, ಆರ್.ಟಿಓ ವೃತ್ತ, ಗನ್ ಹೌಸ್, ಝೂ ರಸ್ತೆ, ಪಿ.ಡಬ್ಲ್ಯು ಡಿ ಫೀಸ್ ನಿಂದ ಆರ್ಕ್ ಗೇಟ್ ವರೆಗೆ ತೆರಳಿ ರಸ್ತೆಗಳನ್ನು ವೀಕ್ಷಿಸಿದರು. ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಿದ್ದಿದ್ದು, ಕೂಡಲೇ ಅವುಗಳನ್ನು ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಸ್ತೆಗಳಲ್ಲಿ ಸಾಕಷ್ಟು ಹೊಂಡಗುಂಡಿಗಳು ಬಿದ್ದಿವೆ. ಜೊತೆಗೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಅಂತಹ ಪ್ರದೇಶಗಳಿಗೆ ವಿಶೇಷವಾಗಿ ಒತ್ತು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.