ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮೋಡಬಿತ್ತನೆ ಕಾರ್ಯಕ್ಕೆ ಕ್ರಮ: ಸುಂದರೇಶ್
ಶಿವಮೊಗ್ಗ, ಅ.13: ಪ್ರಸಕ್ತ ಮುಂಗಾರಿನಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬಾರದ ಕಾರಣ ತೋಟಗಾರಿಕೆ ಬೆಳೆಗಾರರಿಗೆ ಅಗತ್ಯಕ್ಕೆ ತಕ್ಕಂತೆ ನೀರು ಕೊಡುವ ಸದುದ್ದೇಶದಿಂದ ಮೋಡಬಿತ್ತನೆ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರಿಗೆ ಭದ್ರಾ ಜಲಾಶಯದಿಂದ ಅಗತ್ಯಕ್ಕೆ ತಕ್ಕಂತೆ ನೀರು ಕೊಡುವುದು, ಈ ವ್ಯಾಪ್ತಿಯಲ್ಲಿನ ನಗರ-ಪಟ್ಟಣ ಹಾಗೂ ಗ್ರಾಮವಾಸಿಗಳಿಗೆ ಸಕಾಲದಲ್ಲಿ ಕುಡಿಯುವ ನೀರನ್ನು ಒದಗಿಸುವು ಕಷ್ಟಸಾಧ್ಯವೆಂದು ಭಾವಿಸಿ, ಸರಕಾರದೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ನಮ್ಮ ಕೋರಿಕೆಯಂತೆ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೋಡಬಿತ್ತನೆಗೆ ಅನುಮತಿ ನೀಡಿದೆ ಎಂದವರು ತಿಳಿಸಿದ್ದಾರೆ.
ಈ ಸಂಬಂಧ ಇಂದು ಬೆಳಿಗಿನಿಂದ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮೋಡಬಿತ್ತನೆಯ ಕಾರ್ಯದಲ್ಲಿ ಮಗ್ನರಾಗಿರುವ ತಜ್ಞರೊಂದಿಗೆ ನಿರಂತರ ಒಡನಾಟದಲ್ಲಿದ್ದು ಮೋಡಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿರುವ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಮೋಡಗಳು ಗೋಚರಿಸದಿರುವ ಕಾರಣ ಇಂದು ಮೋಡಬಿತ್ತನೆ ಕಾರ್ಯಕೈಗೊಳ್ಳುವುದು ಸಾಧ್ಯವಾಗಲಿಲ್ಲ. ನಾಳೆಯ ದಿನವೂ ಕೂಡಾ ನಿರೀಕ್ಷಿತ ಪ್ರಮಾಣದ ಮೋಡಗಳು ಕಂಡುಬಂದಲ್ಲಿ ಮೋಡಬಿತ್ತನೆ ಕಾರ್ಯಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.