×
Ad

ಚಿಕ್ಕಮಗಳೂರು: ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಶಾಸನ ಪತ್ತೆ

Update: 2017-10-13 23:13 IST

ಚಿಕ್ಕಮಗಳೂರು, ಅ.13: ಸುಮಾರು 921 ವರ್ಷಗಳ ಹಳೆಗನ್ನಡ ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಶಾಸನವನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಪತ್ತೆ ಹಚ್ಚಿದ್ದಾರೆ.

ಮೂಡಿಗೆರೆಯ ತ್ರಿಪುರದ ರಾಧಾಕೃಷ್ಣ ಅವರ ಕಾಫಿತೋಟದಲ್ಲಿ ಕಳಸದ ಕೃಷಿ ಅಧಿಕಾರಿಯಾಗಿರುವ ಪಾಂಡು ರಂಗ ಕ್ಷೇತ್ರ ಕಾರ್ಯದಲ್ಲಿದ್ದಾಗ ಸ್ಥಳೀಯರಾದ ಮಂಜುನಾಥ, ಸುಧಾಕರ್ ನೆರವಿನೊಂದಿಗೆ ಪುರಾತನ ಶಿಲಾಶಾಸನ ಸಂಶೋಧಿ ಸಿದ್ದಾರೆ. ಕಲ್ಯಾಣ ಚಾಲುಕ್ಯರ ಮಹಾಮಂಡಲೇಶ್ವರ ಹೊಯ್ಸಳ ದೊರೆ ವಿನಯಾದಿತ್ಯನ ಕಾಲದ್ದೆನ್ನಲಾದ ಬಳಪದ ಕಲ್ಲಿನಲ್ಲಿ ನಿರ್ಮಿಸಿರುವ ವೀರಗಲ್ಲು ಶಾಸನ ನಾಲ್ಕುವರೆ ಅಡಿ ಎತ್ತರ ಮತ್ತು ಒಂದು ಮುಕ್ಕಾಲು ಅಡಿ ಅಗಲವಿದೆ. ಕೋಟೆ ಕಾಳಗದಲ್ಲಿ ಮಡಿದ ವೀರನೊಬ್ಬನ ಸ್ಮರಣಾರ್ಥ ನಿಲ್ಲಿಸಿರುವ ವೀರಗಲ್ಲು ಇದಾಗಿದ್ದು, ಮೂರುಪಟ್ಟೆ ಹೊಂದಿರುವ ಸುಂದರ ಚಿತ್ರಣವಿದೆ. ಕೆಳಗಿನ ಪಟ್ಟಿಕೆಯಲ್ಲಿ ಕೋಟೆ ಕಾಳಗ, ಅಶ್ವರೂಢ ವೀರನ ಚಿತ್ರಣ, 2ನೆ ಪಟ್ಟಿಕೆಯಲ್ಲಿ ವೀರನೊಬ್ಬ ಖಡ್ಗಾಘಾತದಿಂದ ಮೃತಹೊಂದಿದ್ದು ಅವನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊ ಯ್ಯುವ ದೃಶ್ಯವಿದೆ.

ಮೇಲಿನ ಪಟ್ಟಿಕೆಯಲ್ಲಿ ಮೃತವೀರ ಸ್ವರ್ಗದಲ್ಲಿ ಅಪ್ಸರೆಯರೊಂದಿಗೆ ಸಂಗೀತ ಆಸ್ವಾದಿಸುವ ಚಿತ್ರಣವಿದೆ. 13ಸಾಲಿನ ಹಳೆಗನ್ನಡ ಹೊಯ್ಸಳ ಲಿಪಿಯನ್ನು ಶಾಸನ ಹೊಂದಿದೆ. ಈ ವೀರಗಲ್ಲು ಶಾಸನವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿರುವ ಪಾಡುರಂಗ ಅವರು, ಇದೇ ಅ.28ರಿಂದ 30ರವರೆಗೆ ಕೊಪ್ಪಳದಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡಮಿಯ ವಾರ್ಷಿಕ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆ ಹಿರೇನಲ್ಲೂರಿನಲ್ಲಿ ಸೇಂದ್ರಿಕರ ಕಾಲದ ಜಿಲ್ಲೆಯಲ್ಲೇ ಪ್ರಥಮ ವೆನ್ನಲಾದ ಶಾಸನ ಪತ್ತೆ ಮಾಡಿರುವ ಪಾಡುರಂಗ, ಜಿಲ್ಲೆಯಲ್ಲಿ ಮತ್ತಷ್ಟು ಶಾಸನಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News