×
Ad

ಜೆನರಿಕ್ ಔಷಧಾಲಯ ಪುನಾರಂಭಿಸಲು ದಲಿತ್ ಜನ್ ಸೇನಾ ಒತ್ತಾಯ

Update: 2017-10-13 23:16 IST

ಚಿಕ್ಕಮಗಳೂರು, ಅ.13: ಸರಕಾರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆರಂಭವಾಗಿದ್ದ ಜನೋಪಯೋಗಿ ಔಷಧಾಲಯವನ್ನು ಪುನಾರಂಭಿಸಬೇಕು ಹಾಗೂ ವಾಹನ ನಿಲ್ದಾಣದ ಕರವಸೂಲಾತಿ ನೀತಿಯನ್ನು ಕೈ ಬಿಡಲು ಒತ್ತಾಯಿಸಿ ದಲಿತ್ ಜನ್ ಸೇನಾ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಳೆದ ತಿಂಗಳು ರಾಜ್ಯ ಸರಕಾರವು ಆರಂಭಿಸಿದ ಜನೋಪಯೋಗಿ ಔಷಧಾಲಯದಿಂದ ಜಿಲ್ಲೆಯಲ್ಲಿರುವ ಬಹಳಷ್ಟು ಬಡ ರೋಗಿಗಳಿಗೆ ಅನುಕೂಲವಾಗಿತ್ತು. ಬೇರೆ ಮೆಡಿಕಲ್ಸ್‌ಗಳಲ್ಲಿ ದುಬಾರಿ ಬೆಲೆ ತೆತ್ತು ತರುತ್ತಿದ್ದ ಔಷಧಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದುದ್ದರಿಂದ ಬಹಳಷ್ಟು ಅನುಕೂಲವಾಗುತ್ತಿತ್ತು ಎಂದು ಮನವಿಯಲ್ಲಿ ಹೇಳಲಾಗಿದೆ.

ಈ ಹಿಂದೆಯೇ ಜಿಲ್ಲಾ ವೈದ್ಯಾಧಿಕಾರಿಗಳನ್ನು ಭೆೇಟಿ ಮಾಡಿ ಈ ಆಸ್ಪತ್ರೆಗೆ ಸಂಬಂಧಿಸಿದ ಔಷಧಿಗಳನ್ನಲ್ಲದೆ, ಇಂದು ಜನರನ್ನು ಕಾಡುತ್ತಿರುವ ಮುಖ್ಯ ಕಾಯಿಲೆಗಳಾದ ಮಧುಮೇಹ, ಹೃದಯ ಸಂಬಂಧಿ, ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಕ್ಯಾನ್ಸರ್‌ನಂತಹ ಅನೇಕ ಕಾಯಿಲೆಗಳಿಗೆ, ಜೆನರಿಕ್ ಉತ್ತಮ ಕ್ವಾಲಿಟಿ ಔಷಧಿಗಳನ್ನು ಇಲ್ಲಿ ದೊರೆಯುವಂತೆ ಮಾಡಿದರೆ ದುಪ್ಪಟ್ಟು ಹಣ ತೆತ್ತು ಬೇರೆ ಕಂಪೆನಿಗಳ ಔಷಧಿ ಖರೀದಿಸುವುದು ತಪ್ಪಿದಂತಾಗುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಎಲ್ಲಾ ಕಾಯಿಲೆಗಳ ಔಷಧಿಗಳನ್ನು ಇಲ್ಲೆ ದೊರೆಯುವಂತೆ ಮಾಡಬೇಕಾಗಿ ಮನವಿ ಮಾಡಿದ್ದೆವು. ಆನಂತರ ಆರೋಗ್ಯ ಸಚಿವರ ಭೇಟಿಯ ಸಮಯದಲ್ಲಿ ಬೇರೆ ಕಂಪೆನಿಯ ಔಷಧಿಗಳನ್ನು ಮಾರುತ್ತಿದ್ದಾರೆ ಎಂದು ಔಷಧಾಲಯವನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಈಗ ಅದನ್ನು ಪೂರ್ತಿಯಾಗಿ ಮುಚ್ಚಿರುವುದರಿಂದ ಎಲ್ಲಾ ವೃದ್ಧರು, ಮಕ್ಕಳೂ, ಅಂಗವಿಕಲರು ಈಗ ಬೇರೆ ಔಷಧಾಲಯಗಳಲ್ಲಿ ಅತೀ ಹೆಚ್ಚು ಹಣ ಕೊಟ್ಟು ಖರೀದಿಸುವಂತಾಗಿದೆ. ಆದ್ದರಿಂದ ಬಡ ರೋಗಿಗಳ ಸಮಸ್ಯೆಯನ್ನು ಅರಿತು ಮುಚ್ಚಿರುವ ಜನೋಪಯೋಗಿ ಔಷಧಾಲಯವನ್ನು ಪುನಃ ತೆರೆಸಿ ಸಾರ್ವಜನಿಕರಿಗೆ ಬೇಕಾದ ಎಲ್ಲಾ ರೀತಿಯ ಔಷಧಿಗಳೂ ದೊರಕುವಂತೆ ಮಾಡಿ ಅನೂಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೆ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಿರುವ ವಾಹನ ನಿಲ್ದಾಣ ಕರ ವಸೂಲಿ ನೀತಿ ಅವೈಜ್ಞಾನಿಕವಾಗಿದ್ದು, ಅದನ್ನು ಕೈಬಿಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸೇನಾ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ದಲಿತ್ ಜನ್ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಶ್ವನಾಥ, ದಲಿತ್ ಜನ್ ಸೇನಾ ಜಿಲ್ಲಾ ಮಹಿಳಾ ಅಧ್ಯಕ್ಷೆ ಸ್ವರ್ಣಗೌರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಸಂಚಾಲಕ ಸತ್ಯನಾರಾಯಣ, ಇಕ್ಬಾಲ್, ಕಿಶೋರ್, ಶರತ್, ಸಂದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News