ಅನುಚಿತ ವರ್ತನೆ ತಡೆಗೆ ನಿಗಾ: ಪಿಎಸ್ಸೈ ಸತ್ಯವೇಲು
ಬಣಕಲ್, ಅ.13: ಚಾರ್ಮಾಡಿ ಘಾಟ್‌ನಲ್ಲಿ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿಕೊಂಡು ಅರಣ್ಯ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸುವುದನ್ನು ತಡೆಯಲು ಗಸ್ತು ವಾಹನದ ನಿಗಾ ಇಡಲಾಗುವುದು ಎಂದು ಬಣಕಲ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿಎಸ್ಸೈ ಸತ್ಯವೇಲು ಹೇಳಿದ್ದಾರೆ.
ಬಣಕಲ್ ಠಾಣೆಗೆ ನೂತನವಾಗಿ ಪಿಎಸ್ಸೈಆಗಿ ಸತ್ಯವೇಲು ಆಗಮಿಸಿರುವ ಹಿನ್ನೆಲೆಯಲ್ಲಿ ಠಾಣೆಯಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸರಿಯಾದ ವಾಹನ ನಿಲುಗಡೆ ಇಲ್ಲದಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಶೀಘ್ರದಲ್ಲಿ ವ್ಯವಸ್ಥಿತ ವಾಹನ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂತೆಗೆ ಸಾಗುವ ಮಾರ್ಗದ ವೃತ್ತದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ವ್ಯವಸ್ಥಿತ ವಾಹನ ನಿಲುಗಡೆಗೆ ಈ ಭಾಗದ ವಾಹನ ಮಾಲಕರ ಸಭೆಯನ್ನು ಪ್ರತ್ಯೇಕವಾಗಿ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ದನಗಳ್ಳತನ ಮತ್ತು ಮರಳು ಸಾಗಾಟ ವಾಹನಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯ ಸತೀಶ್ ಮತ್ತಿಕಟ್ಟೆ ಮಾತನಾಡಿ, ಬೇಲೂರಿನಲ್ಲಿ ಅಸ್ಸಾಂ ಕಾರ್ಮಿಕರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ ಎನ್ನಲಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಬಣಕಲ್ ವ್ಯಾಪ್ತಿಯ ಕೆಲ ಕಾಫಿತೋಟಗಳಲ್ಲಿ ಅಸ್ಸಾಂ ಭಾಗದ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿದ್ದಾರೆ. ಕೆಲವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಬೆಳಕಿಗೆ ಬಂದಿದೆ ದೂರಿದ್ದಾರೆ.
ಈ ಸಂದರ್ಭದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ, ತರುವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ. ಭರತ್, ಸ್ಥಳೀಯರಾದ ರಾಮಚಂದ್ರ ಹೊಳ್ಳ, ಯಶೋಧರ್, ಶಿವರಾಮ ಶೆಟ್ಟಿ, ಉದಯ್‌ಕುಮಾರ್, ವಿಕ್ರಂ, ಚಂದ್ರಶೇಖರ್, ರಮೇಶ್‌ಗುಡ್ಡಟ್ಟಿ, ಪೌಲ್ಸನ್, ಸಬ್ಲಿ ದೇವರಾಜ್, ಯತೀಶ್ ಕೂಡಳ್ಳಿ, ಎಎಸ್ಸೈಐ ಶಶಿ, ಪೊಲೀಸ್ ಸಿಬ್ಬಂದಿಯಾದ ಸಂತೋಷ್, ರುದ್ರೇಶ್ ಮತ್ತಿತರರಿದ್ದರು.